ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೋವಿಡ್ ಖಚಿತವಾಗಿರುವುದಾಗಿ ತಿಳಿದುಬಂದಿದೆ. ರಾಜ್ಯಪಾಲರು ಸ್ವತಃ ಕೋವಿಡ್ ಪಾಸಿಟಿವ್ ಎಂದು ಘೋಷಿಸಿದ್ದಾರೆ.
ತಾನು ಕೋವಿಡ್ ಬಾಧಿತನಾಗಿದ್ದು ಚಿಂತೆ ಮಾಡಲು ಏನೂ ಇಲ್ಲ ಎಂದು ರಾಜ್ಯಪಾಲರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಳೆದ ವಾರ ಅವರೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಕೋವಿಡ್ ತಪಾಸಣೆ ಅಥವಾ ಕ್ವಾರಂಟೈನ್ ನಡೆಸಬೇಕೆಂದು ರಾಜ್ಯಪಾಲರು ವಿನಂತಿಸಿರುವರು.
ದೇಶದಲ್ಲೇ ಇತ್ತೀಚೆಗೆ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯ ಕೇರಳವಾಗಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯಪಾಲರು ಸಹ ಕೋವಿಡ್ ಬಾಧಿತರಾಗಿರುವರು ಎಂಬ ಸಂದೇಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 50,357 ಪ್ರಕರಣಗಳು ವರದಿಯಾಗಿವೆ. ಇದು ಕೋವಿಡ್ ಬಾಧಿತರ ಒಟ್ಟು ಸಂಖ್ಯೆಯನ್ನು 84,62,081 ರಷ್ಟು ಏರಿಕೆಯಾಗಿಸಿದೆ. ದೇಶದಲ್ಲಿ ಪ್ರಸ್ತುತ 5,16,632 ಸಕ್ರಿಯ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ, 78,19,887 ಜನರನ್ನು ಗುಣಪಡಿಸಲಾಗಿದೆ. ನಿನ್ನೆ 53,920 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.
ನಿನ್ನೆ ಕೇರಳದಲ್ಲಿ 7002 ಜನರಿಗೆ ಕೋವಿಡ್ ದೃಢಪಟ್ಟಿತ್ತು. 7854 ಜನರನ್ನು ಗುಣಪಡಿಸಲಾಗಿದೆ. ಶುಕ್ರವಾರ 27 ಸಾವುಗಳು ಕೋವಿಡ್ ನಿಂದ ಎಂದು ತಿಳಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 1,640 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 83,208 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಕಿಅಂಶಗಳು ಬೆಳಕು ಚೆಲ್ಲಿವೆ.