ಹೊಸದಿಲ್ಲಿ: ಲೇಹ್ ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ ಭಾಗವಾಗಿ ತೋರಿಸುವ ಬದಲು ಜಮ್ಮು ಹಾಗೂ ಕಾಶ್ಮೀರದ ಭಾಗವಾಗಿ ತೋರಿಸಿರುವುದಕ್ಕೆ ವಿವರಣೆ ನೀಡುವಂತೆ ಸೂಚಿಸಿ ಕೇಂದ್ರ ಸರಕಾರ ಗುರುವಾರ ಟ್ವಿಟ್ಟರ್‌ಗೆ ನೋಟಿಸು ಜಾರಿ ಮಾಡಿದೆ.
ತಪ್ಪಾದ ಭೂಪಟವನ್ನು ತೋರಿಸುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಗೆ ಅಗೌರವ ತೋರಿರುವುದರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟ್ಟರ್‌ಗೆ ಐದು ದಿನಗಳ ಕಾಲಾವಕಾಶ ನೀಡಿದೆ.
ಟ್ವಿಟ್ಟರ್‌ನ ಜಾಗತಿಕ ಉಪಾಧ್ಯಕ್ಷರಿಗೆ ಕಳುಹಿಸಿದ ನೋಟಿಸ್‌ನಲ್ಲಿ ಸಚಿವಾಲಯ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿದೆ. ಲೇಹ್ ಅದರ ಕೇಂದ್ರ. ಆದರೆ, ಲೇಹ್ ಅನ್ನು ಜಮ್ಮು ಕಾಶ್ಮೀರದ ಭಾಗವೆಂದು ತೋರಿಸುತ್ತಿರುವುದು ಭಾರತದ ಸಾರ್ವಭೌಮ ಸಂಸತನ್ನು ಕಡೆಗಣಿಸುವ ಟ್ವಿಟ್ಟರ್‌ನ ಉದ್ದೇಶಪೂರ್ವಕ ಪ್ರಯತ್ನ ಎಂದು ಹೇಳಿದೆ. ಈ ಹಿಂದೆ ಟ್ವಿಟ್ಟರ್ ಲೇಹ್ ಅನ್ನು ಚೀನಾದ ಭಾಗವೆಂದು ತೋರಿಸಿತ್ತು. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಟ್ವಿಟ್ಟರ್‌ನ ಮುಖ್ಯ ಕಾರ್ಯದರ್ಶಿ ಜ್ಯಾಕ್ ಡೊರ್ಸಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಅನಂತರ ಟ್ವಿಟ್ಟರ್ ಚೀನಾದಿಂದ ಲೇಹ್ ಅನ್ನು ತೆಗೆದು ಭೂಪಟವನ್ನು ಭಾಗಶಃ ತಿದ್ದುಪಡಿ ಮಾಡಿತ್ತು.