ವಾಷಿಂಗ್ಟನ್: ಅಮೆರಿಕದ ಅದ್ಯಕ್ಷರ ಕಚೇರಿಗೆ ನೇಮಕವಾಗಿರುವ ನಾನು ಮೊದಲ ಮಹಿಳೆಯಾಗಿರಬಹುದು.. ಆದರೆ ನಾನೇ ಕೊನೆಯವಳಲ್ಲ. ಭವಿಷ್ಯದಲ್ಲಿ ಸಾಕಷ್ಟು ಮಹಿಳೆಯರು ಈ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಅಮೆರಿಕದ ನೂತನ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್, ಅಮೆರಿಕದ ಉನ್ನತ ಸ್ಥಾನಕ್ಕೆ ಆಯ್ಕೆಯಾದ ನನ್ನ ಗೆಲವು ಕೇವಲ ಆರಂಭವಷ್ಟೇ.. ಭವಿಷ್ಯದಲ್ಲಿ ಇಂತಹ ಸಾಕಷ್ಟು ಗೆಲುವುಗಳು ಮಹಿಳೆಯರ ಪಾಲಾಗಲಿದೆ. ಅಮೆರಿರಕ ಅಧ್ಯಕ್ಷೀಯ ಕಚೇರಿಗೆ ಆಯ್ಕೆಯಾದ ಮೊದಲ ಮಹಿಳೆ ನಾನಾಗಿರಬಹುದು. ಆದರೆ ನಾನೇ ಕೊನೆಯವಳಲ್ಲ. ಇಂದು ರಾತ್ರಿ ಈ ಕಾರ್ಯಕ್ರಮವನ್ನು ನೋಡುತ್ತಿರುವ ಪ್ರತಿಯೊಬ್ಬ ಪುಟ್ಟ ಹುಡುಗಿಯರಿಗೂ ಕೂಡ ಈ ದೇಶದಲ್ಲಿನ ಅವಕಾಶಗಳ ಕುರಿತು ಪರಿಚಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿನ ಫಲಿತಾಂಶ ಪ್ರಕ್ರಿಯೆ ಚಾಲ್ತಿಯಲ್ಲಿದ್ದಾಗ ಇಡೀ ಪ್ರಪಂಚ ವೀಕ್ಷಿಸುತ್ತಿತ್ತು. ಅಮೆರಿಕದ ಪ್ರತಿಯೊಬ್ಬ ಪ್ರಜೆ ಕೂಡ ನೂತನ ಅಮೆರಿಕದ ಕನಸು ಸಾಕಾರವಾಗುವ ಕ್ಷಣಕ್ಕಾಗಿ ಕಾಯುತ್ತಿದ್ದರು. ಈಗ ಆ ಕ್ಷಣ ಬಂದಿದೆ. ನೀವು ಹೊಸ ಉಜ್ವಲ ದಿನವನ್ನು ನೀಡಿದ್ದೀರಿ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಟ ಮತ್ತು ತ್ಯಾಗ ಅತ್ಯಗತ್ಯ. ಆದರೆ ಅದರಲ್ಲಿ ಸಂತೋಷ ಮತ್ತು ಪ್ರಗತಿಯಿದೆ. ಏಕೆಂದರೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಶಕ್ತಿ ನಮಗಿದೆ. ನನ್ನ ಈ ಸ್ಥಿತಿಗೆ ಕಾರಣರಾದ ನನ್ನ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರಿಗೆ ಚಿರಋಣಿಯಾಗಿದ್ದೇನೆ. ಆಕೆ ಅಮೆರಿಕಕ್ಕೆ ಬಂದಾಗ ಕೇವಲ 19 ವರ್ಷ ವಯಸ್ಸು. ಆಕೆ ಅಂದು ಅಮೆರಿಕಕ್ಕೆ ಕಾಲಿಟ್ಟಾಗ ಇಂತಹ ಒಂದು ಕ್ಷಣ ಬರುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಕ್ಕೆ ಸಾಧ್ಯವಿಲ್ಲ. ಆದರೆ ಮಾಡುವ ಕಾರ್ಯದಲ್ಲಿ ಆಕೆ ತುಂಬಾ ನಂಬಿಕೆ ಇಟ್ಟಿದ್ದರು.
ಆಕೆಯ ತಲೆಮಾರಿನಲ್ಲಿದ್ದ ಕಪ್ಪು ಮಹಿಳೆಯರು, ಏಷ್ಯನ್, ಬಿಳಿ, ಲ್ಯಾಟಿನಾ, ಸ್ಥಳೀಯ ಅಮೆರಿಕನ್ ಮಹಿಳೆಯರ ಬಗ್ಗೆ ಯೋಚಿಸುತ್ತಿದ್ದೇನೆ, ಅವರು ನಮ್ಮ ರಾಷ್ಟ್ರದ ಇತಿಹಾಸದುದ್ದಕ್ಕೂ ಈ ಕ್ಷಣಕ್ಕಾಗಿ ದಾರಿ ಮಾಡಿಕೊಟ್ಟಿದ್ದಾರೆ ಎಂದು ಕಮಲಾ ಹ್ಯಾರಿಸ್ ಹೇಳಿದರು.