ಮಂಜೇಶ್ವರ: ಶ್ರೀ ಕಟೀಲೇಶ್ವರೀ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ 10 ನೇ ನೆರವಿನ ಯೋಜನಾ ಮೊತ್ತವನ್ನು ಮಂಜೇಶ್ವರ ನಿವಾಸಿಯೂ ಇದೀಗ ಕೋಟೆಕಾರು ಬಳಿಯ ಕೊಲ್ಯ ಕನೀರುತೋಟದಲ್ಲಿ ವಾಸಿಸುವ ನರೇಶ (40) ಎಂಬವರಿಗೆ ಶನಿವಾರ ಸಂಜೆ ಮನೆಗೆ ತೆರಳಿ ನೀಡಲಾಯಿತು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ ಚೆಕ್ಕನ್ನು ನರೇಶ್ ರವರಿಗೆ ಹಸ್ತಾಂತರಿಸಿದರು. ಈ ವೇಳೆ ಟ್ರಸ್ಟ್ ನ ಸ್ಥಾಪಕ ರತನ್ ಕುಮಾರ್ ಹೊಸಂಗಡಿ, ಸದಸ್ಯ ಜೀವನ್ ಕುಮಾರ್ ಚಿಗುರುಪಾದೆ ವಿತರಿಸಿದ ನಿಯೋಗದಲ್ಲಿದ್ದರು.
ಮೂಲತಃ ಮಂಜೇಶ್ವರ ಬಳಿಯ ಉದ್ಯಾವರ ಹೊಯ್ಗೆ ನಿವಾಸಿ ದಿ. ಗೋಪಾಲ ಬೆಳ್ಚಡ - ದಿ. ಸುಶೀಲಾ ದಂಪತಿಯ ಪುತ್ರರಾದ ನರೇಶ್ ಅವರು ಯುವಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ಅಲ್ಲದೇ ಕಾಯಕದಲ್ಲಿ ಪೈಂಟಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಪತ್ನಿ ತೃಪ್ತಿ ಹಾಗೂ ಮಕ್ಕಳಾದ ತ್ರಿನಾಥ್ (12) ಮತ್ತು ನಥಾಶ (11 ತಿಂಗಳು) ಎಂಬವರೊಂದಿಗೆ ಕನಿರುತೋಟದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಕರೊನಾ ತಗಲಿ ಚಿಕಿತ್ಸೆ ಪಡೆದು ಬಳಿಕ ಸಂಪೂರ್ಣ ಚೇತರಿಸಲ್ಪಟ್ಟು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ಇವರಿಗೆ ಇದ್ದಕ್ಕಿದ್ದಂತೆ ಕೈ, ಕಾಲುಗಳ ಚಲನ ಶಕ್ತಿ ಕುಂಠಿತಗೊಂಡು ಇದೀಗ ಮನೆಯಲ್ಲಿ ವೀಲ್ ಚಯರ್ ನ ಸಹಾಯದಿಂದಲೇ ಅತ್ತಿಂದಿತ್ತ ತೆರಳುವ ಪರಿಸ್ಥಿತಿಯಾಗಿದೆ. ಪತ್ನಿ ಬೀಡಿ ಕಟ್ಟಿ ಸಿಗುವ ಅಲ್ಪ ಆದಾಯದಿಂದ ಈ ಕುಟುಂಬದ ನಿತ್ಯದ ಖರ್ಚು, ಔಷಧಿ ಖರ್ಚು ನಿಭಾಯಿಸಬೇಕಾಗಿದೆ. ಎದ್ದೇಳಲು ಸಂಕಷ್ಟ ಪಡುತ್ತಿದ್ದು, ಪತ್ನಿಯ ಆರೈಕೆಯಲ್ಲಿ ನರೇಶ್ ರವರು ದಿನ ದೂಡುತ್ತಿದ್ದಾರೆ. ಇದೀಗ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಮಕ್ಕಳನ್ನ ನೆನೆಯುತ್ತಾ ಪರಿತಪಿಸುತ್ತಿದ್ದು, ಇವರ ಸಂಕಷ್ಟದ ಬಗ್ಗೆ ಮಾಹಿತಿ ತಿಳಿದು ಚಾರಿಟೇಬಲ್ ಟ್ರಸ್ಟ್ ನೆರವು ನೀಡಿದೆ.