ಹೊಸದಿಲ್ಲಿ: ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಗುಂಪೊಂದು ನಿರ್ದಯವಾಗಿ ಥಳಿಸುತ್ತಿದ್ದ ಫೋಟೊ ಜಾಗತಿಕ ಸುದ್ದಿಸಂಸ್ಥೆ ರಾಯ್ಟರ್ಸ್ ನಿಂದ ವರ್ಷದ ಚಿತ್ರದ ಪಟ್ಟಿಯಲ್ಲಿ ಭಾರತದ ಭಾವಚಿತ್ರವಾಗಿ ಆಯ್ಕೆಯಾಗಿದೆ.
ಫೆಬ್ರವರಿ 24 ರಂದು ರಾಯ್ಟರ್ಸ್ ಹಿರಿಯ ಛಾಯಾಚಿತ್ರಗಾರ ದಾನಿಶ್ ಸಿದ್ದೀಕಿ ಅವರು ಅದ್ನಾನ್ ಅಬಿದಿ ಜೊತೆಗೆ ಹಿಂಸಾಪೀಡಿತ ಪ್ರದೇಶಕ್ಕೆ ತೆರಳಿದ್ದಾಗ ಈ ಫೋಟೊವನ್ನು ತೆಗೆದಿದ್ದರು.
ಜಾಗತಿಕ ವಿದ್ಯಮಾನಗಳನ್ನು ಒಳಗೊಂಡಿರುವ ಫೋಟೊಗ್ರಾಫಿಗಳನ್ನು ಪ್ರತಿ ವರ್ಷದ ಅಂತ್ಯದಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಚಿತ್ರ ಭಾರತದಿಂದ ಆಯ್ಕೆಯಾಗಿರುವ ಏಕೈಕ ಫೋಟೊವಾಗಿದೆ.
ಈ ಚಿತ್ರವು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾಚಾರದ ಮೂಲಕ ಪರಾಕಾಷ್ಠೆ ತಲುಪಿರುವುದನ್ನು ಗುರುತಿಸಿದೆ.
'ದೇಶದ ಅಲ್ಪ ಸಂಖ್ಯಾತ ಸಮುದಾಯದ ಮೇಲೆ ನೂತನ ಪೌರತ್ವ ಕಾನೂನು ತಾರತಮ್ಯ ಎಸಗುತ್ತಿದೆ ಎಂದು ಭಾವಿಸಿ ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದಿದ್ದರು. ಫೆಬ್ರವರಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಗಳು ಹಾಗೂ ಬೆಂಬಲಿಗರ ನಡುವೆ ಪೈಪೋಟಿ ನಡೆದು ಹಿಂಸಾರೂಪ ಪಡೆದುಕೊಂಡಿತ್ತು ಎಂದು ಸಿದ್ದೀಕಿ ರಾಯ್ಟರ್ಸ್ ಗೆ ತಿಳಿಸಿದ್ದಾರೆ.