ನವದೆಹಲಿ: ಮತ್ತೊಂದು ಉತ್ತಮ ಪ್ಯಾಕೇಜ್ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸುಳಿವು ನೀಡಿದ್ದಾರೆ. ಆದರೆ, ಎಷ್ಟು ಸಮಯದ ಒಳಗೆ ಘೋಷಣೆಯಾಗಬಹುದು ಎಂಬುದನ್ನು ತಿಳಿಸಿಲ್ಲ.
'ಆರ್ಥಿಕತೆಯ ಯಾವ ವಲಯ ಅಥವಾ ಜನತೆಯ ಯಾವ ವರ್ಗಕ್ಕೆ ಯಾವ ಸಮಯದಲ್ಲಿ ಸಹಾಯ ಬೇಕಾಗಿದೆ ಎಂಬುದನ್ನು ನಿರ್ಣಯಿಸಲು ನಾವು ತಳಮಟ್ಟದಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಿದ್ದೇವೆ. ಕೈಗಾರಿಕಾ ಮಂಡಳಿಗಳು, ವ್ಯಾಪಾರ ಸಂಘಟನೆಗಳು, ಅನೇಕ ಸಚಿವಾಲಯಗಳಿಂದ ಸಲಹೆಗಳನ್ನು ಪಡೆಯುತ್ತಿದ್ದೇವೆ. ಅವರ ಸಲಹೆಗಳನ್ನು ಪರಿಶೀಲಿಸಿದ ಬಳಿಕ ಆರ್ಥಿಕತೆಯ ಆದ್ಯತೆ ನೋಡಿಕೊಂಡು ಸಮಯೋಚಿತ ನಿರ್ಧಾರ ಕೈಗೊಳ್ಳಲಿದ್ದೇವೆ' ಎಂದು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
'ಯಾವಾಗ ಪ್ಯಾಕೇಜ್ ಘೋಷಣೆಯಾಗಬಹುದು ಎಂಬುದನ್ನು ಈಗಲೇ ಹೇಳಲಾಗದು. ಆದರೆ ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ನಡೆಗಳ ಬಗ್ಗೆ ಚರ್ಚಿಸುತ್ತಿದೆ' ಎಂದು ಪಾಂಡೆ ಹೇಳಿದ್ದಾರೆ.
ದೇಶದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ. ಸುಸ್ಥಿರ ಬೆಳವಣಿಗೆಯತ್ತ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.