ಶ್ರೀಹರಿಕೋಟಾ: ಅಂದಾಜು 11 ತಿಂಗಳ ಬಳಿಕ ಬಾಹ್ಯಾಕಾಶ ಯೋಜನೆಯೊಂದನ್ನು ಕೈಗೆತ್ತಿಕೊಂಡ ಭಾರತೀಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಶನಿವಾರ ಪಿಎಸ್‌ಎಲ್‌ವಿ ಸಿ49 ರಾಕೆಟ್ ಮುಖಾಂತರ ಭಾರತದ 'ಇಒಎಸ್-01' ಉಪಗ್ರಹ ಸೇರಿದಂತೆ 9 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ಪಿಎಸ್‌ಎಲ್‌ವಿಯ 51ನೇ ಮಿಷನ್ ಇದಾಗಿದೆ. 2019ರ ಡಿ.11ರಂದು ಭಾರತದ ನೆಲದಿಂದ ರಿಸ್ಯಾಟ್-2ಬಿಆರ್1 ಉಪಗ್ರಹವನ್ನು ಇಸ್ರೊ ಉಡಾವಣೆಗೊಳಿಸಿತ್ತು. ಇದಾದ ಬಳಿಕ ಕಳೆದ ಜನವರಿಯಲ್ಲಿ ಫ್ರೆಂಚ್ ಗಯಾನದಿಂದ ಜಿಸ್ಯಾಟ್-30ನ್ನು ಉಡಾವಣೆಗೊಳಿಸಲಾಗಿತ್ತು. ಶನಿವಾರ ಮಧ್ಯಾಹ್ನ 3.12ರ ವೇಳೆಗೆ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ(ಎಸ್‌ಡಿಎಸ್‌ಸಿ) ಉಡಾವಣೆಗೊಂಡ ಪಿಎಸ್‌ಎಲ್‌ವಿ ಸಿ49ರಲ್ಲಿ ಇಒಎಸ್-01 ಜೊತೆಗೆ ಲಿಥುಏನಿಯಾದ ಒಂದು, ಲಕ್ಸೆಂಬರ್ಗ್‌ನ ನಾಲ್ಕು ಹಾಗೂ ಅಮೆರಿಕದ ನಾಲ್ಕು ಉಪಗ್ರಹಗಳು ಇದ್ದವು. ರಾಕೆಟ್ ಸಾಗುವ ಪಥದಲ್ಲಿ ಬಾಹ್ಯಾಕಾಶ ತ್ಯಾಜ್ಯಗಳು ಇದ್ದ ಕಾರಣ ಉಡಾವಣೆ 10 ನಿಮಿಷ ವಿಳಂಬವಾಗಿತ್ತು. ಉಡಾವಣೆಗೊಂಡ 20 ನಿಮಿಷದ ಬಳಿಕ ಪಿಎಸ್‌ಎಲ್‌ವಿ ರಾಕೆಟ್ ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು.
ಕೃಷಿ, ಅರಣ್ಯ ಹಾಗೂ ವಿಪತ್ತು ನಿರ್ವಹಣೆಗೆ ಇಒಎಸ್-01 ಉಪಗ್ರಹ ನೆರವು ನೀಡಲಿದ್ದು, ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿ.(ಎನ್‌ಎಸ್‌ಐಎಲ್) ಜೊತೆಗಿನ ವಾಣಿಜ್ಯ ಒಪ್ಪಂದದಡಿ ಇತರೆ ಉಪಗ್ರಹಗಳನ್ನು ಉಡಾವಣೆಗೊಳಿಸಲಾಗಿದೆ ಎಂದು ಇಸ್ರೊ ತಿಳಿಸಿದೆ. ಇಒಎಸ್-01ನಲ್ಲಿರುವ 'ಸಿಂಥೆಟಿಕ್ ಅಪಾರ್ಚರ್ ರೇಡಾರ್', ಯಾವುದೇ ವಾತಾವರಣದಲ್ಲಿ ಭೂಮಿಯ ಹೈರೆಸೊಲ್ಯೂಷನ್(ಉತ್ಕೃಷ್ಟ ಗುಣಮಟ್ಟದ) ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.
ಕೋವಿಡ್ ಕಾರಣದಿಂದಾಗಿ ಮಾಧ್ಯಮಕ್ಕೆ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿಲ್ಲ. ಬದಲಾಗಿ ತನ್ನ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳಲ್ಲಿ ಉಡಾವಣೆಯ ನೇರದೃಶ್ಯಾವಳಿಗಳನ್ನು ಇಸ್ರೊ ಪ್ರಸಾರ ಮಾಡಿತು.
ವರ್ಕ್ ಫ್ರಂ ಹೋಂ ಆಗಲ್ಲ: 'ಇಸ್ರೊಗೆ ಇದೊಂದು 'ಅಸಾಮಾನ್ಯ' ಯೋಜನೆ. ವರ್ಕ್ ಫ್ರಮ್ ಹೋಂನಲ್ಲಿದ್ದುಕೊಂಡು ರಾಕೆಟ್ ಉಡಾವಣೆ ಸಾಧ್ಯವಿಲ್ಲ. ವಿವಿಧ ಕೇಂದ್ರಗಳಿಂದ ಶ್ರೀಹರಿಕೋಟಗೆ ಬಂದು ಜೊತೆಯಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಯಶಸ್ವಿ ಉಡಾವಣೆಗಾಗಿ ಎಲ್ಲರಿಗೂ ಅಭಿನಂದನೆ' ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ತಿಳಿಸಿದರು.