ಪೆರ್ಲ: 'ನಿವೃತ್ತಿಯೇ ಇಲ್ಲದ ಪ್ರವೃತ್ತಿಯಿಂದಾಗಿ ಶಿಕ್ಷಕ ವೃತ್ತಿ ಸಂತೃಪ್ತಿ ನೀಡಿದೆ ಎಂದು ವಿದಾಯಕೂಟದಲ್ಲಿ ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರ ಮನದಾಳದ ಮಾತು.
ಕಳೆದ ವರ್ಷ ನಿವೃತ್ತರಾದ ಕನ್ನಡ ಮಾಧ್ಯಮ ಶಿಕ್ಷಕರಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಉಪಜಿಲ್ಲಾ ಘಟಕದ ಆಶ್ರಯದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಮೊದಲ ಹಂತದ ಕಾರ್ಯಕ್ರಮವನ್ನು ಕೊವಿಡ್ ನಿಯಮಾವಳಿಗಳಿಗೆ ಅನುಗುಣವಾಗಿ ಕಾಟುಕುಕ್ಕೆ ಬಾಲಪ್ರಭ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಸರಳ ಸಮಾರಂಭವನ್ನು ಕುಂಬಳೆ ಬ್ಲಾಕ್ ಸಂಯೋಜನಾಧಿಕಾರಿ ಶಿವರಾಮ ಅವರು ಉದ್ಘಾಟಿಸಿದರು.
ನಿವೃತ್ತರಾದ ಎಚ್ ಲೋಕನಾಥ ಶೆಟ್ಟಿ(ಎಸ್ ಎಸ್ ಎಚ್ ಎಸ್ ಎಸ್ ಕಾಟುಕುಕ್ಕೆ), ಸದಾನಂದ ಶೆಟ್ಟಿ ಕುದ್ವ (ಎ ಎಲ್ ಪಿ ಶಾಲೆ ಬೆದ್ರಂಪಳ್ಳ), ಗಿರಿಜಾ ಎಸ್(ಬಿ ಎ ಯು ಪಿ ಶಾಲೆ ಕಾಟುಕುಕ್ಕೆ), ಅಂಬಿಕಾಸರಸ್ವತಿ(ಎಸ್ ಎಸ್ ಎ ಎಲ್ ಪಿ ಎಸ್ ಉದಯಗಿರಿ), ಶ್ರೀದೇವಿ(ಜಿ ಎಚ್ ಎಸ್ ಪೆರಡಾಲ) ಇವರನ್ನು ಗೌರವಿಸಲಾಯಿತು. ಪ್ರದೀಪ್ ಕುಮಾರ್ ಹಾಗೂ ವೀಣಾ ಟೀಚರ್ ನಿವೃತ್ತರನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯ ಗಣೇಶ್ ಕುಮಾರ್ ಹಾಗೂ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಅನ್ವಿತಾ ಪ್ರಾರ್ಥಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಯಂ ಸ್ವಾಗತಿಸಿ, ನಿರೂಪಣೆ ಮಾಡಿದರು. ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಪೆರ್ಲ ವಂದಿಸಿದರು.