ತಿರುವನಂತಪುರ: ಬಿನೀಶ್ ಕೊಡಿಯೇರಿ ಅವರ ಮನೆಯ ಮೇಲೆ ಗುರುವಾರ ನಡೆಸಿದ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಸಿಪಿಎಂ ಹೇಳಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿನೀಶ್ ಕೊಡಿಯೇರಿ ಶಾಮೀಲಾಗಿರುವನೆಂದು ಶಂಕಿಸಲಾಗುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬ ನಿಲುವಿಂದ ಸಿಪಿಎಂ ಹಿಂದೆಸರಿದಿಲ್ಲ. ಸಿಪಿಐ (ಎಂ) ಪಕ್ಷದ ಸಭೆಯಲ್ಲಿ ಈ ಬಗೆಗಿನ ರಾಜಕೀಯ ಪ್ರೇರಿತ ಕ್ರಮಗಳನ್ನು ಬಹಿರಂಗಪಡಿಸುವ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಬಿನೀಶ್ ನ ಕುಟುಂಬ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸಿಪಿಎಂ ಹೇಳಿದೆ. ಬುಧವಾರ ಬೆಳಿಗ್ಗೆ ಪ್ರಾರಂಭವಾದ ಇಡಿ ದಾಳಿ 26 ಗಂಟೆಗಳ ಸುಧೀರ್ಘ ತನಿಖೆಯ ಬಳಿಕ ಗುರುವಾರ ಮಧ್ಯಾಹ್ನ ವೇಳೆ ನಾಟಕೀಯ ಬೆಳವಣಿಗೆಯ ಮೂಲಕ ಕೊನೆಗೊಂಡಿರುವುದು ಉಲ್ಲೇಖಾರ್ಹವಾಯಿತು.
ಇದೇ ವೇಳೆ ಜಾರಿ ನಿರ್ದೇಶನಾಲಯವು ಮಾಡುವುಸದನ್ನು ಮಾಡಲಿ ಎಂದು ಬಿನೀಶ್ ಕೊಡಿಯೇರಿ ಹೇಳಿದರು. ಬೆಂಗಳೂರಿನಲ್ಲಿ ನಿನ್ನೆ ಬಿನೀಶ್ ನನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಮನೆಯ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಆದಾಗ್ಯೂ, ಮಾಧ್ಯಮಗಳ ಇತರ ಪ್ರಶ್ನೆಗಳಿಗೆ ಉತ್ತರಿಸಲು ಬಿನೀಶ್ ನಿರಾಕರಿಸಿದರು.
ತಿರುವನಂತಪುರಂನಲ್ಲಿರುವ ಬಿನೀಶ್ ಅವರ ಮನೆಯನ್ನು ಜಾರಿ ನಿರ್ದೇಶನಾಲಯ ನಿನ್ನೆ ಪರಿಶೀಲಿಸಿತು. ಈ ವೇಳೆ ಬಿನೀಶ್ ಅವರ ಪತ್ನಿ, ಮಗು ಮತ್ತು ಅತ್ತೆ-ಮಾವ ಮನೆಯಲ್ಲಿದ್ದರು. ಅವರ ಪತ್ನಿ ಮತ್ತು ಮಗುವನ್ನು ವಶಕ್ಕೆ ತೆಗೆದುಕೊಳ್ಳುವುದನ್ನು ಸಂಬಂಧಿಕರು ಪ್ರತಿಭಟಿಸಿದರು. ಎರಡೂವರೆ ವರ್ಷದ ಮಗು ಸೇರಿದಂತೆ ಬಿನೀಶ್ ಪತ್ನಿ ಇಡಿ ಬಂಧನದಲ್ಲಿದೆ ಎಂದು ಕುಟುಂಬ ದೂರಿದೆ. ಇದರ ಬೆನ್ನಲ್ಲೇ ಮಕ್ಕಳ ಹಕ್ಕುಗಳ ಆಯೋಗದ ಅಧಿಕಾರಿಗಳು ಬಿನೀಶ್ ಅವರ ಮನೆಗೆ ಭೇಟಿ ನೀಡಿದರು.