ನವದೆಹಲಿ: ಜುಲೈ ತಿಂಗಳಿನಿಂದಲೂ ಭಾರತ ಬಹು ವಿಧದ ಕ್ಷಿಪಣಿ ಪರೀಕ್ಷೆ ನಡೆಸುವಲ್ಲಿ ಯಶಸ್ವಿಯಾಗಿದೆ. ಮೇ ತಿಂಗಳಿನಿಂದ ಲಡಾಖ್ ಗಡಿ ಪ್ರದೇಶದ ಉದ್ದಕ್ಕೂ ಸೇನಾಪಡೆ ನಿಯೋಜಿಸಿರುವ ಚೀನಾಕ್ಕೆ ಇದು ಸ್ಪಷ್ಟ ಸಂದೇಶವಾಗಿದೆ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ.
ವ್ಯಾಪಕ ಶ್ರೇಣಿಯ ಕ್ಷಿಪಣಿಗಳ ಪೈಕಿ, ಭಾರತೀಯ ಸೇನೆಯು ತನ್ನ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ನವೆಂಬರ್ 24 ರಂದು ಬಂಗಾಳ ಕೊಲ್ಲಿಯಲ್ಲಿ ನಿಖರತೆಯೊಂದಿಗೆ ಉಡಾಯಿಸಿತ್ತು. ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸಿರುವ 2.8 ಮಾಕ್ ವೇಗದ ಸೂಪರ್ ಸಾನಿಕ್ ಕ್ರೂಸ್ ಕ್ಷೀಪಣಿಯನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ಆಧಾರಿತ ವೇದಿಕೆಗಳಿಂದಲೂ ಉಡಾವಣೆ ಮಾಡಬಹುದಾಗಿದೆ.ಇದು ಚೀನಾಕ್ಕೆ ಸಂದೇಶವಾಗಿದೆ. ಒಂದು ವೇಳೆ ಚೀನಾದಿಂದ ಅನಾಹುತಗಳು ಎದುರಾದರೆ ಭೂಮಿ, ನೀರು ಮತ್ತು ಆಕಾಶದಿಂದಲೂ ಪ್ರತಿದಾಳಿ ನಡೆಸಲು ಭಾರತೀಯ ಪಡೆಗಳು ಸಮರ್ಥವಾಗಿವೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಕೆ ಚತುರ್ವೇದಿ ಹೇಳಿದ್ದಾರೆ.
ಈ ಪರೀಕ್ಷೆಗಳು ನಮ್ಮದೇ ಆದ ಸಂಕೀರ್ಣ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಕ್ಷಿಪಣಿ ವ್ಯವಸ್ಥೆಗಳನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಸಹ ತೋರಿಸುತ್ತವೆ. ದೇಶದ ಕ್ಷಿಪಣಿ ತಂತ್ರಜ್ಞಾನವು ಶತ್ರುಗಳ ಸೂಕ್ಷ್ಮ ಗುರಿಗಳ ಮೇಲೆ ದಾಳಿ ಮಾಡುವಂತಹ ಸಾಮಥ್ರ್ಯವನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿನ ಎಲ್ ಎಸಿಯ ಉದ್ದಕ್ಕೂ ಹಲವಾರು ಕಾರ್ಯತಂತ್ರದ ಸ್ಥಳಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ ಬ್ಯಾಟರಿಗಳನ್ನು ನಿಯೋಜಿಸಲಾಗಿದೆ. ಬ್ರಹ್ಮಾಸ್ ಕ್ಷಿಪಣಿಗಳನ್ನು 40 ಕ್ಕೂ ಹೆಚ್ಚು ಸುಖೋಯ್ ಫೈಟರ್ ಜೆಟ್‍ಗಳಲ್ಲಿ ಸಂಯೋಜಿಸಲಾಗುತ್ತಿದೆ. ಮೂಲಗಳ ಪ್ರಕಾರ, ಡಿಆರ್‍ಡಿಒ 400 ಕಿಲೋಮೀಟರ್ ವಿಸ್ತೃತ ವ್ಯಾಪ್ತಿಯೊಂದಿಗೆ ಬ್ರಹ್ಮೋಸ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ನಮ್ಮ ಸಾಮಥ್ರ್ಯವನ್ನು ಚೀನಾಕ್ಕೆ ತೋರಿಸಿದ್ದು, ಅದು ಎಲ್ಲಿಯಾದರೂ ದಾಳಿ ಮಾಡಿದರೆ ನಾವು ಅವುಗಳನ್ನು ಹೊಡೆದುರುಳಿಸಬಹುದಾಗಿದೆ ಎಂದು ರಕ್ಷಣಾ ತಜ್ಞ ಎಸ್ ಕೆ ಚಟರ್ಜಿ ತಿಳಿಸಿದ್ದಾರೆ.
ಶತ್ರುಗಳ ಬಂಕರ್‍ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಮುಖ್ಯ ಯುದ್ಧ ಟ್ಯಾಂಕ್‍ಗಳನ್ನು ನಾಶಮಾಡುವ ಉದ್ದೇಶದಿಂದ ‘ನಾಗ್ ಹೆಲಿನಾ’ ನ ಹೆಲಿಕಾಪ್ಟರ್ ಆವೃತ್ತಿಯ ಧ್ರುವಸ್ತ್ರವನ್ನು ಜುಲೈನಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿತು. ಅಕ್ಟೋಬರ್‍ನಲ್ಲಿ, ಮೂರನೇ ತಲೆಮಾರಿನ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ (ಎಟಿ ಜಿಎಂ) ನಾಗ್ ಅಂತಿಮ ಪ್ರಯೋಗದ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದೇ ರೀತಿಯಲ್ಲಿ ರುದ್ರಮ್ -1 ಹೆಸರಿನ ವಿಕಿರಣ ವಿರೋಧಿ ಕ್ಷಿಪಣಿಯನ್ನು ಸುಖೋಯ್ -30 ಎಂಕೆಐನಿಂದ ಪರೀಕ್ಷಿಸಲಾಯಿತು, ಇದನ್ನು 2022 ರೊಳಗೆ ಸೇವೆಗೆ ಸೇರಿಸಲು ಯೋಜಿಸಲಾಗಿದೆ.
ಈ ನಡುವೆ, ಡಿಆರ್‍ಡಿಒ ಪರಮಾಣು-ಸಾಮಥ್ರ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ -2 ರ ರಾತ್ರಿಯ ಪ್ರಯೋಗವನ್ನು ಸಹ ನಡೆಸಿದೆ. ಮೇಲ್ಮೈಯಿಂದ ಮೇಲ್ಮೈಗೆ 300 ಕಿ.ಮೀ ವ್ಯಾಪ್ತಿಯಲ್ಲಿ ಗುರಿಗಳನ್ನು ಆಕ್ರಮಿಸುವ ಸಾಮಥ್ರ್ಯ ಹೊಂದಿದೆ. ಶೌರ್ಯ ಕ್ಷಿಪಣಿ ಮುಂದಿನದು ಎಂದು ಅಧಿಕಾರಿಯೊಬ್ಬರು ಹೊಸ ಯುಗದ ಶಸ್ತ್ರಾಸ್ತ್ರದ ಬಗ್ಗೆ ಹೇಳಿದ್ದಾರೆ. ಅದು ಸುಮಾರು 200 ಕೆಜಿ ತೂಕದ ಪರಮಾಣು ಸಿಡಿತಲೆ ಸಾಗಿಸಬಲ್ಲದು ಮತ್ತು ಸೆಕೆಂಡಿಗೆ 2.4 ಕಿ.ಮೀ ವೇಗದಲ್ಲಿ ಹಾರಲಿದೆ.