ಬದಿಯಡ್ಕ: ಕೋವಿಡ್ ಪರಿಣಾಮದಿಂದ ಸಮಾಜವು ಚೇತರಿಸಿಕೊಳ್ಳುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಸಹಕಾರಿ ಸಂಸ್ಥೆಗಳ ನಾಲ್ಕು ಸ್ತಂಭಗಳಂತಿರುವ ಸದಸ್ಯರು, ಆಡಳಿತ ಮಂಡಳಿ, ನೌಕರರು ಮತ್ತು ಸರಕಾರಿ ಇಲಾಖೆ ಇವುಗಳ ಸಮನ್ವಯವೇ ಸಹಕಾರ ಭಾರತಿ ಆಡಳಿತ ನಡೆಸುತ್ತಿರುವ ಸಂಸ್ಥೆಗಳ ವಿಶೇಷತೆಯಾಗಿರಬೇಕು ಎಂದು ಸಹಕಾರ ಭಾರತಿ ಆಖಿಲಭಾರತ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಅಭಿಪ್ರಾಯಪಟ್ಟರು.
ನೀರ್ಚಾಲು ಪೆರಡಾಲ ಸೇವಾ ಸಹಕಾರಿ ಬೇಂಕಿನ ಸಭಾಭವನದಲ್ಲಿ ಜರಗಿದ ತಾಲೂಕು ಸಮ್ಮೇಳನದಲ್ಲಿ ಮಾರ್ಗದರ್ಶನವನ್ನು ನೀಡುತ್ತಾ ಅವರು ಮಾತನಾಡಿದರು. ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಉಪನೊಂದಾವಣಾಧಿಕಾರಿ ಹಾಗೂ ಸಹಕಾರ ಭಾರತಿ ಪ್ರಾಂತ ಸಮಿತಿ ಸದಸ್ಯರಾದ ಐತ್ತಪ್ಪ ಮವ್ವಾರು ಸಹಕಾರಿ ಸಂಘಗಳು ಎದುರಿಸುತ್ತಿರುವ ಪ್ರಚಲಿತ ಸಮಸ್ಯೆಗಳ ಕುರಿತು ತರಗತಿ ನಡೆಸಿಕೊಟ್ಟರು. ಪೆರಡಾಲ ಸೇವಾಸಹಕಾರಿ ಬೇಂಕ್ ಅಧ್ಯಕ್ಷ ಜಯದೇವ ಖಂಡಿಗೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಕಿದೂರು, ಜಿಲ್ಲಾ ಕಾರ್ಯದರ್ಶಿ ಗಣೇಶ ಪಾರೆಕಟ್ಟ, ಎಂಪ್ಲೋಯಿಸ್ ಸೆಲ್ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕೋಡೋತ್, ತಾಲೂಕು ಮಹಿಳಾ ಸೆಲ್ ಪ್ರಮುಖರಾದ ಶ್ರೀಲತ, ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ತಾಲೂಕು ಸಂಘಚಾಲಕ್ ಶಿವಶಂಕರ ಗುಣಾಜೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತಾಲೂಕು ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯದರ್ಶಿ ಗಣಪತಿ ಪ್ರಸಾದ್ ವಂದಿಸಿದರು. ತಾಲೂಕು ಮಟ್ಟದಲ್ಲಿ ನೂತನವಾಗಿ ರೂಪೀಕರಿಸಿದ ಎಂಪ್ಲೋಯೀಸ್ ಸೆಲ್ ಹಾಗೂ ಮಹಿಳಾ ಸೆಲ್‍ನ್ನ ಘೋಷಿಸಲಾಯಿತು.