ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸಬೇಕು, ಜ್ಯುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಹಾಗೂ ಇವರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ 'ಹೋರಾಟ ಸರಪಳಿ' ಕಾರ್ಯಕ್ರಮ ಭಾನುವಾರ ಜಿಲ್ಲೆಯಲ್ಲಿ ಜರುಗಿತು. ತಲಪ್ಪಾಡಿಯಿಂದ ಕಾಸರಗೋಡು ಕಣ್ಣೂರು ಜಿಲ್ಲೆಯ ಗಡಿ ಪ್ರದೇಶ ಕಾಲಿಕಡವು ವರೆಗೆ ಹೋರಾಟಸರಪಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಲಪ್ಪಾಡಿಯಿಂದ ಕಾಸರಗೋಡು ವರೆಗೆ ರಾಷ್ಟ್ರೀಯ ಹೆದ್ದಾರಿ-66 ಹಾಗೂ ಕಾಸರಗೋಡಿನಿಂದ ಚಂದ್ರಗಿರಿ ಹಾದಿಯ ಕೆಎಸ್‍ಟಿಪಿ ರಸ್ತೆಯಲ್ಲಿ ಕಾಞಂಗಾಡು ವರೆಗೆ ಹಾಗೂ ಅಲ್ಲಿಂದ ಮುಂದಕ್ಕೆ ರಾ. ಹೆದ್ದಾರಿಯಲ್ಲಿ ಹೋರಾಟ ಸರಪಳಿ ಆಯೋಜಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ಭ್ರಷ್ಠಚಾರದ ಕೂಪವಾಗಿದ್ದು, ಇದಕ್ಕೆ ಸಿಪಿಎಂ ಕೇಂದ್ರ ಸಮಿತಿಯ ಅಭಯಹಸ್ತವಿದೆ. ಭ್ರಷ್ಟಾಚಾರದ ಹಣದಲ್ಲಿ ಒಂದು ಭಾಗ ಕೇಂದ್ರಸಮಿತಿಗೂ ರವಾನೆಯಾಗುತ್ತಿರುವ ಬಗ್ಗೆ ಸಂಶಯವಿದ್ದು, ಸಿಎಂ ಪ್ರಿನ್ಸಿಪಲ್ ಸೆಕ್ರೆಟರಿ ಎಂ.ಶಿವಶಂಕರ್ ಪ್ರಕರಣದಲ್ಲಿ ಶಾಮೀಲಾಗಿ ಅಮಾನತುಗೊಂಡರೂ, ಸರ್ಕಾರದ ವಿರುದ್ಧ ಕೇಂದ್ರಸಮಿತಿ ಚಕಾರವೆತ್ತದಿರುವುದು ಇದಕ್ಕೆ ಪುಷ್ಟಿ ನೀಡಿರುವುದಾಗಿ ತಿಳಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಪಿ.ಆರ್. ಸುನಿಲ್, ಸುಧಾಮ ಗೋಸಾಡ, ಎನ್. ಸತೀಶ್ ಮುಂತಾದವರು ಉಪಸ್ಥಿತರಿದ್ದರು. ರಾಜ್ಯಸಮಿತಿ ತೀರ್ಮಾನದನ್ವಯ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭ್ರಷ್ಟಾಚಾರದಲ್ಲಿ ತೊಡಗಿರುವ ಎಡರಂಗ ಸರ್ಕಾರದ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುವ ನಿಟ್ಟಿನಲ್ಲಿ 'ಹೋರಾಟ ಸರಪಳಿ' ಕಾರ್ಯಕ್ರಮ ಆಯೋಜಿಸಲಾಗಿದೆ.