ತಿರುವನಂತಪುರ: ರಾಜ್ಯ ಬಿಜೆಪಿಯಲ್ಲಿ ಅವಗಣಿಸಲ್ಪಟ್ಟವರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭಾ ಸುರೇಂದ್ರನ್ ಮುಂದುವರಿದಿರುವುದಾಗಿ ತಿಳಿದುಬಂದಿದೆ. ಗುಂಪುಗಾರಿಕೆಯ ವಿವಾದದ ಭಾಗವಾಗಿ ಪಕ್ಷದಲ್ಲಿ ಅವಗಣಿಸಲ್ಪಟ್ಟವರನ್ನು ಒಟ್ಟುಗೂಡಿಸುವುದು ಶೋಭಾ ಸುರೇಂದ್ರನ್ ಅವರ ಈಗಿನ ನಡೆಯಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಮೇಲೆ ಒತ್ತಡ ಹೆಚ್ಚಿಸುವುದು ಶೋಭಾ ಸುರೇಂದ್ರನ್ ಅವರ ಉದ್ದೇಶ ಎನ್ನಲಾಗಿದೆ.
ಅತೃಪ್ತರನ್ನು ಜೊತೆಯಾಗಿಸುವ ಕ್ರಮ:
ಕೆ ಸುರೇಂದ್ರನ್ ಅವರನ್ನು ಬಹಿರಂಗವಾಗಿ ಟೀಕಿಸಿರುವ ಶೋಭಾ ಸುರೇಂದ್ರನ್, ಬಿಜೆಪಿ ಭಿನ್ನಮತೀಯರನ್ನು ಒಗ್ಗೂಡಿಸುವ ಪ್ರಕ್ರಿಯೆಯಲ್ಲಿದ್ದಾರೆ. ರಾಜ್ಯ ನಾಯಕತ್ವದಲ್ಲಿ ಮಾತ್ರವಲ್ಲದೆ ಪಕ್ಷದ ವಿವಿಧ ಜಿಲ್ಲೆಗಳ ಮರುಸಂಘಟನೆಯಲ್ಲಿ ಅತೃಪ್ತರಾಗಿರುವವರೂ ಹೆಚ್ಚಿನ ಸಂಖ್ಯೆಯಲ್ಲಿ ಭಿನ್ನಮತೀಯರಿದ್ದಾರೆ.
ಶೋಭಾ ಸುರೇಂದ್ರನ್ ರ ನಿರ್ಲಕ್ಷ್ಯ:
ಶೋಭಾ ಮತ್ತು ಅವರ ತಂಡವು ಸುರೇಂದ್ರನ್ ವಿರುದ್ಧ ನಿಯಂತ್ರಣ ಸಾಧಿಸಲು ನಿರ್ಧರಿಸಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯ ನಾಯಕತ್ವವು ಶೋಭಾ ಸುರೇಂದ್ರನ್ ಅವರ ಸಾರ್ವಜನಿಕ ಟೀಕೆಗಳನ್ನು ಸತತವಾಗಿ ನಿರ್ಲಕ್ಷಿಸಿದೆ ಮತ್ತು ಯಾವುದೇ ಮುಲಾಜುಗಳಿಲ್ಲದೆ ರಾಷ್ಟ್ರೀಯ ನಾಯಕತ್ವಕ್ಕೆ ಮಾಹಿತಿ ನೀಡಿದೆ.
ಆರ್.ಎಸ್.ಎಸ್.ರಂಗಕ್ಕೆ!
ಬಿಜೆಪಿಯಲ್ಲಿನ ಸಮಸ್ಯೆಗಳನ್ನು ಕೊನೆಗೊಳಿಸಲು ಆರ್‍ಎಸ್‍ಎಸ್ ಪ್ರಯತ್ನಿಸುತ್ತಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸುವ ಪ್ರವೃತ್ತಿಯನ್ನು ಸಂಘ ನಾಯಕತ್ವ ಒಪ್ಪುವುದಿಲ್ಲ. ಆರ್‍ಎಸ್‍ಎಸ್ ನಿರ್ದೇಶನದ ಭಾಗವಾಗಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ಆರ್‍ಎಸ್‍ಎಸ್ ಕಚೇರಿಗೆ ಕರೆಸಲಾಗಿದೆ. ಕೇರಳದ ವಿವಾದಗಳ ಕುರಿತು ಸಿದ್ಧಪಡಿಸಿದ ವರದಿಯನ್ನು ಶೀಘ್ರದಲ್ಲೇ ಆರ್‍ಎಸ್‍ಎಸ್ ರಾಷ್ಟ್ರೀಯ ನಾಯಕತ್ವಕ್ಕೆ ಹಸ್ತಾಂತರಿಸಲಿದೆ ಎನ್ನಲಾಗಿದೆ.
24 ನಾಯಕರಿಂದ ಪತ್ರ:
ಕೆ ಸುರೇಂದ್ರನ್ ವಿರುದ್ಧ ಇಪ್ಪತ್ನಾಲ್ಕು ರಾಜ್ಯ ನಾಯಕರು ಕೇಂದ್ರ ನಾಯಕತ್ವಕ್ಕೆ ದೂರು ನೀಡಿದ್ದರು. ನಾಯಕರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭಾ ಸುರೇಂದ್ರನ್ ಅವರನ್ನು ಬೆಂಬಲಿಗರಾಗಿದ್ದಾರೆ. ಮಾಜಿ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ.ವೇಲಾಯುಧನ್ ಅವರು ಶೋಭಾ ಸುರೇಂದ್ರನ್ ಅವರ ಬೆನ್ನಿಗೆ ನಿಂತ ಬಳಿಕ ಇತರರು ಶೋಭಾರ ಬೆಂಬಲಕ್ಕೆ ನಿಂತಿರುವರೆನ್ನಲಾಗಿದೆ. ಸುರೇಂದ್ರನ್ ಅಧ್ಯಕ್ಷರಾದ ಬಳಿಕ 24 ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದು, ಪಕ್ಷವು ಗುಂಪುಗಳಾಗಿ ವಿಭಜನೆಗೊಳ್ಳುತ್ತಿದ್ದು ಕೇವಲ ಒಂದು ವಿಭಾಗದ ನಾಯಕರು ಪಕ್ಷದ ಮೇಲೆ ಹಿಡಿತ ಸಾಧಿಸಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿಸಲಾಗಿದೆ.