ಟೆಹರಾನ್: ತನ್ನ ಪ್ರಮುಖ ಅಣುವಿಜ್ಞಾನಿಗಳಲ್ಲಿ ಒಬ್ಬರಾದ ಮೋಹ್ಸೆನ್ ಫಖ್ರಿಜಾದೆಹ್ ಅವರನ್ನು ಶುಕ್ರವಾರ ನಡೆದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ತಿಳಿಸಿದೆ. ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಅದು ಆರೋಪಿಸಿದೆ.
ಮೋಹ್ಸೆನ್ ಫಖ್ರಿಜಾದೆಹ್ ಅವರ ಕಾರನ್ನು ಗುರಿಯಾಗಿರಿಸಿಕೊಂಡು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಆ ವೇಳೆ ಮೋಹ್ಸೆನ್ ಅವರ ಭದ್ರತಾ ಸಿಬ್ಬಂದಿ ಮತ್ತು ದಾಳಿಕೋರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಗುಂಡೇಟಿನಿಂದ ಮೋಹ್ಸೆನ್ ತೀವ್ರವಾಗಿ ಗಾಯಗೊಂಡಿದ್ದರು.ಕೂಡಲೇ ಅವರನ್ನು ಸೇನಾ ಸಂಶೋಧನಾ ಮತ್ತು ಆವಿಷ್ಕಾರ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಹುತಾತ್ಮರಾದರು ಎಂದು ಇರಾನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.
ಮೋಹ್ಸೆನ್ ಅವರು ಇರಾನ್‌ನ ಪ್ರಮುಖ ಅಣುವಿಜ್ಞಾನಿಗಳಲ್ಲಿ ಒಬ್ಬರಾಗಿದ್ದು, 2000ದ ಇಸವಿಯಲ್ಲಿ 'ಅಮದ್' ಎಂಬ ಪರಮಾಣು ಕಾರ್ಯಕ್ರಮವನ್ನು ನಡೆಸಿದ್ದರು. ಇರಾನ್ ಅಣ್ವಸ್ತ್ರ ಬೆಳವಣಿಗೆ ಸಾಧಿಸುವಲ್ಲಿ ಮೋಹ್ಸೆನ್ ಪ್ರಮುಖ ಪಾತ್ರ ವಹಿಸಿದ್ದರು. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಎಂದು ಮೋಹ್ಸೆನ್ ಅವರನ್ನು ಇರಾನ್‌ನ ಬದ್ಧವೈರಿ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದರು.
ಮೋಹ್ಸೆನ್ ಅವರು ಅಬ್ಸರ್ಡ್ ನಗರದ ಸಮೀಪ ಕಾರಿನಲ್ಲಿ ಪ್ರಯಾಣಿಸುವಾಗ ಈ ದಾಳಿ ನಡೆದಿದೆ. ಮೋಹ್ಸೆನ್ ಅವರ ಮೇಲೆ ಇಸ್ರೇಲ್ ಬಹಳ ಹಳೆಯ ಮತ್ತು ತೀವ್ರ ವೈರತ್ವ ಹೊಂದಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.