ಮಧೂರು: ಕೂಡ್ಲು ಪ್ರದೇಶದ ಜನರ ಬಹುಕಾಲದ ಬೇಡಿಕೆಯಾಗಿರುವ ಕೇಳುಗುಡ್ಡೆ-ಗಂಗೆ ಸಂಪರ್ಕ ರಸ್ತೆ ಸಾಕಾರಗೊಳ್ಳುತ್ತಿದೆ. ಸರಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನು ನ.4 ರಂದು ಬೆಳಗ್ಗೆ 11 ಗಂಟೆಗೆ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಲೋಕಾರ್ಪಣೆಗೊಳಿಸುವರು.
ಈ ರಸ್ತೆಯು ಕೇಳುಗುಡ್ಡೆಯಿಂದ ಕೂಡ್ಲು ಬಯಲಿನ ಮೂಲಕ ಸಾಗಿ ಗಂಗೆ ರಸ್ತೆಯನ್ನು ಸಂಪರ್ಕಿಸಲಿದೆ. ಇದರಿಂದಾಗಿ ಕೇಳುಗುಡ್ಡೆ-ಚಟ್ಲ-ಕುಚ್ಚಿಕ್ಕಾಡು ಮತ್ತು ಸೂರ್ಲು ಪ್ರದೇಶಗಳ ಸಾವಿರಾರು ಮಂದಿಗೆ ಗಂಗೆ, ರಾಮದಾಸನಗರ, ಕಾಳ್ಯಂಗಾಡು, ಕುತ್ಯಾಳ, ಪೆರ್ನಡ್ಕ, ಬೆದ್ರಡ್ಕ, ಉಳಿಯತ್ತಡ್ಕ ಮುಂತಾದ ಪ್ರದೇಶಗಳಿಗೆ ತೆರಳಲು ಸಮೀಪವಾಗಲಿದೆ. ಅಂತೆಯೇ ಕೂಡ್ಲು, ಗಂಗೆ, ಕನ್ನಿಗುಡ್ಡೆ, ಕಾಳ್ಯಂಗಾಡು ಪ್ರದೇಶಗಳ ಜನರಿಗೆ ಕಾಸರಗೋಡು ನಗರಕ್ಕೆ ತೆರಳಲು ಸಮೀಪದ ಹಾಗು ಸುಲಭ ರಸ್ತೆಯಾಗಿದೆ.
ಸಮಾರಂಭದಲ್ಲಿ ಉಪಾಧ್ಯಕ್ಷ ದಿವಾಕರ ಆಚಾರ್ಯ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಈ ರಸ್ತೆಯನ್ನು ಎರಡೂ ಕಡೆಗಳಿಂದ ಸಂಪರ್ಕಿಸಲು ಕಾಸರಗೋಡು ಬ್ಲಾಕ್ ಪಂಚಾಯತಿ ವತಿಯಿಂದ ಕುದುರೆಕಟ್ಟ ತೋಡಿಗೆ ನಿರ್ಮಿಸಲಾದ ನೂತನ ಸೇತುವೆಯ ಲೋಕಾರ್ಪಣೆಯನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷ ಮಹಮ್ಮದ್ ಕುಂಞÂ ಚಾಯಂಡಡಿ ನೆರವೇರಿಸುವರು. ಬ್ಲಾಕ್ ಪಂಚಾಯತ್ ಸದಸ್ಯೆ ಯಶೋದಾ ಎಸ್.ನಾೈಕ್ ಉಪಸ್ಥಿತರಿರುವರು.