ಕಾಸರಗೋಡು: ಕೋವಿಡ್ ಕಟ್ಟುನಿಟ್ಟುಗಳ ಹಿನ್ನೆಲೆಯಲ್ಲಿ ಮನೆಗಳಲ್ಲೇ ಉಳಿದುಕೊಂಡಿರುವ ಮಕ್ಕಳು ಸಮಾಜಿಕ ಬದುಕಿನ ಕನಸು ಹೊತ್ತು ನಡೆಸಿದ ಮಕ್ಕಳ ಸಂಸತ್ತು ಕಾರ್ಯಕ್ರಮ ವೈವಿಧ್ಯಮಯ ಉತ್ಸವಾಗಿ ಪರಿಣಮಿಸಿತ್ತು. ಸಮಾಜದ ಏಳಿಗೆಗಾಗಿ ಮಕ್ಕಳು ಕೂಡ ವಹಿಸಬೇಕಾದ ಪಾತ್ರಗಾರಿಕೆಯನ್ನು ಚಾಚಾ ನೆಹರೂ ಅವರ ಜನ್ಮದಿನದಂದು ಮಕ್ಕಳ ದಿನಾಚರಣೆ ಅಂಗವಾಗಿ ಚಿಣ್ಣರು ತೋರಿಕೊಟ್ಟರು.
ಶಿಶು ದಿನಾಚರಣೆ ಅಂಗವಾಗಿ ಜಿಲ್ಲಾ ಶಿಶು ಕಲ್ಯಾಣ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಕ್ಕಳ ಸಂಸತ್ತು ಕಾರ್ಯಕ್ರಮ ವಿಭಿನ್ನ ಅನುಭವಕಟ್ಟಿಕೊಟ್ಟಿದೆ. ನಾಳಿನ ಜನಾಂಗಕ್ಕಾಗಿ ಭದ್ರ ಬುನಾದಿ ಒದಗಿಸಲು ಈ ಮಕ್ಕಳ ಕನಸು ಪೂರಕವಾಗಿರುವುದು ಖಚಿತಗೊಂಡಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಶಿಶು ದಿನಾಚರಣೆಯ ಸಂದೇಶ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಸಮಾಜದಲ್ಲಿ ರಂಗಕ್ಕಿಳಿದು ಚಟುವಟಿಕೆ ನಡೆಸಲು ಕಲಿಕೆಯ ಮೂಲಕ ಗಳಿಸಿರುವ ಸ್ವಾವಲಂಬಿತನ ಪೂರಕವಾಗುತ್ತದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣದ ಅಭಿವೃದ್ಧಿಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ ಎಂದು ನುಡಿದರು.
ಕಾರ್ಯಕ್ರಮ ಅಂಗವಾಗಿ ಮಕ್ಕಳ ಪ್ರಧಾನಿ ಆಗಿ ಪಾತ್ರ ವಹಿಸಿದ್ದ ಎಡಚ್ಚಾಕೈ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ನಬೀಲಾ ಮಕ್ಕಳ ಸಂಸತ್ತು ಉದ್ಘಾಟಿಸಿದರು. ಮಕ್ಕಳ ಸ್ಪೀಕರ್ ಆಗಿದ್ದ ರಾಜಪುರಂ ಹಾಲಿಫಾಮಿಲಿ ಅನುದಾನಿತ ಹಿರಿಯ ಪ್ರಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಸಾನ್ವಿಯಾ ಸಿನಾಯ್ ಉಪಸ್ಥಿತರಿದ್ದರು. ಉದುನೂರು ಸೆಂಟ್ರಲ್ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾಋಥಿ ನಿರಾಮಯ್ ಸ್ವಾಗತಿಸಿದರು. ವಿದ್ಯಾಗಿರಿ ಎಸ್.ಎ.ಬಿ.ಎಂ.ಪಿ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಟಿ.ಅನ್ವತಾ ವಂದಿಸಿದರು.
ಶಿಶು ದಿನಾಚರಣೆಯ ಅಂಚೆಚೀಟಿಯನ್ನು ಜಿಲ್ಲಾ ವಾರ್ತಧಿಕಾರಿ ಮಧುಸೂದನನ್ ಎಂ. ಅವರು ಬಿಡುಗೆಗೊಳಿಸಿ, ಮೋಟೂಸ್ ವೀಡಿಯೋ ಖ್ಯಾತಿಯ ಮಡಿಕೈ ವೊಕೇಶನಲ್ ಹೈರರ್ ಸೆಕೆಂಡರಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಕೆ.ವಿ.ದೇವರಾಜ್ ಅವರಿಗೆ ಹಸ್ತಾಂತರಿಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಿನಿಮಾ ನಟಿ ಮಹಿಮಾ ನಂಬ್ಯಾರ್, ರಾಜ್ಯ ಶಿಶು ಕಲ್ಯಾಣ ಸಮಿತಿ ಕಾರ್ಯಕಾರಿ ಸದಸ್ಯ ಒ.ಎಂ.ಬಾಲಕೃಷ್ಣನ್ ಮಾಸ್ಟರ್, ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಅಬ್ದುಲ್ ಕರೀಂ, ಜತೆ ಕಾರ್ಯದರ್ಶಿ ಸೂರಜ್, ಕಾರ್ಯಕಾರಿ ಸದಸ್ಯ ಸತೀಶನ್ ಕರಿಂದಳಂ, ಪಿ.ವಿ. ಪ್ರವೀಣ್, ಜಿಲ್ಲಾ ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಎಸ್.ಸಯನಾ ಮೊದಲಾದವರು ಉಪಸ್ಥಿತರಿದ್ದರು.