ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ರಾಜ್ಯಪಾಲ ಫಗು ಚೌಹಾಣ್ ಅವರನ್ನು ಭೇಟಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಲ್ಲದೆ ಪ್ರಸಕ್ತ ವಿಧಾನಸಭೆಯನ್ನು ವಿಸರ್ಜಿಸುವುಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.
ಇತ್ತೀಚಿಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‍ಡಿಎ ಗೆಲುವು ಸಾಧಿಸಿದ್ದು, ಮತ್ತೆ ನಿತೀಶ್ ಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯ ಸಿದ್ಧತೆಯಲ್ಲಿ ತೊಡಗಿದೆ.
ರಾಜ್ಯಪಾಲರು ನಿತೀಶ್ ಕುಮಾರ್ ರಾಜೀನಾಮೆಯನ್ನು ಅಂಗೀಕರಿಸಿದ್ದು, ನೂತನ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿದ್ದಾರೆ. ಇಂದು ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ, ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಅಂಗೀಕರಿಸಿ, ಅದನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ.
ಭಾನುವಾರ ಎನ್‍ಡಿಎ ಶಾಸಕರು ಸಭೆ ಸೇರಲಿದ್ದು, ಈ ಸಭೆಯಲ್ಲಿ ಹೊಸ ಮುಖ್ಯಮಂತ್ರಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ನಿತೀಶ್ ಕುಮಾರ್ ಅವರೇ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ.