ಕೊಚ್ಚಿ: ಜಾರಿ ನಿರ್ದೇಶನಾಲಯದ ವಿರುದ್ಧ ಮುಖ್ಯಮಂತ್ರಿಯ ಮಾಜಿ ಮುಖ್ಯ ಕಾರ್ಯದರ್ಶಿ ಎಂ.ಶಿವಶಂಕರ್ ನ್ಯಾಯಾಲಯದಲ್ಲಿ ತಿರುಗಿಬಿದ್ದ ಘಟನೆ ಇಂದು ನಡೆದಿದೆ.
ಪ್ರಸ್ತಾವಿತ ಚಿನ್ನ ಸಾಗಾಣೆ ಮತ್ತು ಇತರ ಪ್ರಕರಣಗಳಲ್ಲಿ ಭಾಗಿಯಾದ ರಾಜಕೀಯ ನಾಯಕರ ಹೆಸರನ್ನು ಬಹಿರಂಗ ಪಡಿಸುವಂತೆ ಇ.ಡಿ. ಒತ್ತಡ ಹೇರುತ್ತಿದ್ದು, ಹಾಗೆ ಮಾಡದ ಕಾರಣ ತನ್ನನ್ನು ಬಂಧಿಸಲಾಗಿದೆ ಎಂದು ಶಿವಶಂಕರ್ ನ್ಯಾಯಾಲಯಕ್ಕೆ ತಿಳಿಸಿದರು. ಒಟ್ಟು ಈ ಪ್ರಕರಣದ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದು ಹೇಳಿದರು.
ಶಿವಶಂಕರ್ ಅವರು ಎರ್ನಾಕುಳಂ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ ವಿವರಣಾತ್ಮಕ ಜ್ಞಾಪಕ ಪತ್ರದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ನಾಳೆ ವಿಚಾರಣೆ ನಡೆಸಲಾಗುವುದು. ತನಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ. ಚಿನ್ನದ ಕಳ್ಳಸಾಗಣೆ ಮತ್ತು ಲೈಫ್ ಮಿಷನ್ ಮುಂತಾದ ಪ್ರಕರಣಗಳಲ್ಲಿ ರಾಜಕೀಯ ನಾಯಕರನ್ನು ಹೆಸರಿಸಲು ಒತ್ತಡವಿದೆ. ಆದರೆ ತಾನದನ್ನು ಬಿಟ್ಟುಕೊಡುವುದಿಲ್ಲ ಎಂದು ಶಿವಶಂಕರ್ ಸ್ಪಷ್ಟಪಡಿಸಿದರು.
ಜೊತೆಗೆ ಶಿವಶಂಕರ್ ಅವರು ತಮ್ಮ ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಮತ್ತು ಸ್ವಪ್ನಾ ನಡುವಿನ ವಾಟ್ಸಾಪ್ ಸಂದೇಶದ ಸಂಪೂರ್ಣ ಪಠ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಲು ವಿನಂತಿಸಿದ ಅವರು ಚಿನ್ನದ ಕಳ್ಳಸಾಗಣೆಗಾಗಿ ಯಾವುದೇ ಕಸ್ಟಮ್ಸ್ ಅಧಿಕಾರಿಯನ್ನು ಕರೆದಿಲ್ಲ ಎಂದ ಹೇಳಿದರು. ಶಿವಶಂಕರ್ ಅವರನ್ನು ಪ್ರಸ್ತುತ ಕಕ್ಕನಾಡ್ ಜಿಲ್ಲಾ ಜೈಲಿನಲ್ಲಿ ಕಸ್ಟಮ್ಸ್ ಪ್ರಶ್ನಿಸುತ್ತಿದೆ.