HEALTH TIPS

ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಜೊತೆ ಪ್ರಧಾನಿ ಮೋದಿ 'ಮೊದಲ ಮಾತು'

         ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ್ದಾರೆ. ಇಂಡೊ-ಪೆಸಿಫಿಕ್‌ ಭಾಗದಲ್ಲಿ ಭಾರತ-ಅಮೆರಿಕದ ಸಹಕಾರ ಹಾಗೂ ಕೋವಿಡ್‌-19 ಸಾಂಕ್ರಾಮಿಕ ಪರಿಸ್ಥಿತಿ ಎದುರಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ.

       ಇತ್ತೀಚೆಗಷ್ಟೇ ಮುಕ್ತಾಯವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಿರುದ್ಧ ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡನ್‌ ಗೆಲುವು ಸಾಧಿಸಿದ್ದು, ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮತ್ತು ನಿಯೋಜಿತ ಅಧ್ಯಕ್ಷ ಬೈಡನ್‌ ಮಾತುಕತೆ ನಡೆಸಿದ್ದಾರೆ.


       ಚರ್ಚೆಯ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, 'ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಫೋನ್‌ ಮೂಲಕ ಮಾತನಾಡಿ ಅಭಿನಂದನೆ ತಿಳಿಸಿದೆ. ಭಾರತ-ಅಮೆರಿಕ ಯೋಜನ ಬದ್ಧ ಪಾಲುದಾರಿಕೆಯ ಬಗ್ಗೆ ಮತ್ತೊಮ್ಮೆ ಗಟ್ಟಿ ಪಡಿಸಿಕೊಳ್ಳಲಾಗಿದೆ. ಕೋವಿಡ್‌-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ ಹಾಗೂ ಇಂಡೊ-ಪೆಸಿಫಿಕ್‌ ಭಾಗದಲ್ಲಿ ಸಹಕಾರ ಸೇರಿದಂತೆ ಉಭಯ ರಾಷ್ಟ್ರಗಳ ಆದ್ಯತೆ ಮತ್ತು ಕಾಳಜಿಯ ಬಗ್ಗೆ ಚರ್ಚಿಸಲಾಯಿತು' ಎಂದಿದ್ದಾರೆ.

      ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

'ಕಮಲಾ ಹ್ಯಾರಿಸ್‌ ಅವರಿಗೂ ಅಭಿನಂದನೆಗಳನ್ನು ತಿಳಿಸಿದೆ. ಅವರ ಯಶಸ್ಸು ಭಾರತೀಯ-ಅಮೆರಿಕನ್‌ ಸಮುದಾಯದ ಸದಸ್ಯರಿಗೆ ಸ್ಫೂರ್ತಿ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಭಾರತ-ಅಮೆರಿಕದ ಬಾಂಧವ್ಯಕ್ಕೆ ಅವರು ಶಕ್ತಿಯ ಮೂಲವಾಗಿದ್ದಾರೆ' ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

       ನವೆಂಬರ್‌ 7ರಂದೇ ಅಮೆರಿಕದ ಮಾಧ್ಯಮಗಳು ಜೋ ಬೈಡನ್‌ ಮತ್ತು ಕಮಲಾ ಹ್ಯಾರಿಸ್ ಅವರ ಗೆಲುವು ಘೋಷಿಸಿವೆ. ಆದರೆ, ಡೊನಾಲ್ಡ್ ಟ್ರಂಪ್‌ ಈವರೆಗೂ ಸೋಲು ಒಪ್ಪಿಕೊಂಡಿಲ್ಲ.

ಬೈಡನ್‌ ಅವರೊಂದಿಗೆ ಈ ಹಿಂದೆ ನಡೆಸಿದ ಮಾತುಕತೆಯನ್ನು ಪ್ರಧಾನಿ ಮೋದಿ ಮೆಲುಕು ಹಾಕಿದ್ದಾರೆ. 2014 ಮತ್ತು 2016ರಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ್ದರು. 2016ರ ಭೇಟಿಯ ಸಮಯದಲ್ಲಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಬೈಡನ್‌ ಮುನ್ನಡೆಸಿದ್ದರು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.

      ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಬೈಡನ್‌ ಉಪಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಭಾರತ-ಅಮೆರಿಕ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಒಪ್ಪಂದಗಳು ಏರ್ಪಟ್ಟವು.

ಬೈಡನ್‌ ಅವರ ಆಡಳಿತ ಅವಧಿಯಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ವಿಸ್ತರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries