ಬದಿಯಡ್ಕ: ಬದಿಯಡ್ಕ ಗ್ರಾ.ಪಂ.ಅಧ್ಯಕ್ಷರೂ, ಹಿರಿಯ ಕಾಂಗ್ರೆಸ್ಸ್ ಧುರೀಣರೂ ಆದ ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಸುಧೀರ್ಘ ಕಾಲದ ಕಾಂಗ್ರೆಸ್ಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಪಕ್ಷದೊಳಗೆ ಕಸಿವಿಸಿಗೆ ಕಾರಣವಾಗಿದೆ.
ದೀನಬಂಧು ಎಂದೇ ಖ್ಯಾತರಾಗಿ, 250 ಕ್ಕಿಂತಲೂ ಹೆಚ್ಚು ಉಚಿತ ಮನೆಗಳನ್ನು ಬಡ-ಬಗ್ಗರಿಗೆ ದಾನಗೈಯ್ದಿರುವ ಕಿಳಿಂಗಾರಿನ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪುತ್ರಾಗಿರುವ ಕೆ.ಎನ್.ಕೃಷ್ಣ ಭಟ್ ಐಕ್ಯರಂಗದಿಂದ ಗೆದ್ದು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್ ನಲ್ಲಿ ನಡೆಯಲಿರುವ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಯಲ್ಲಿ ಮಂಗಳವಾರ(ನ.10) ಅಧಿಕಾರಾವಧಿ ಪೂರ್ಣಗೊಳಿಸಿ ಪಕ್ಷಕ್ಕೆ ಅಧಿಕೃತ ರಾಜೀನಾಮೆ ನೀಡಿದ್ದಾರೆ.
ಪಕ್ಷದೊಳಗಿನ ಆಂತರಿಕ ಕಚ್ಚಾಟಗಳಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಕೆ.ಎನ್.ಕೃಷ್ಣ ಭಟ್ ಸಮರಸ ಸುದ್ದಿಗೆ ತಿಳಿಸಿದ್ದಾರೆ. ಪಕ್ಷದ ಮಂಡಲ ಸಮಿತಿಯ ಧೋರಣೆಗಳು ಅತೃಪ್ತಿ ನೀಡಿದೆ. ಸುಧೀರ್ಘ ಕಾಲದ ಪಕ್ಷದ ಸೇವೆಯನ್ನು ಅವಗಣಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ಕೆ.ಎನ್.ಕೃಷ್ಣ ಭಟ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲು ಸ್ವಾಗತಿಸಿದ್ದಾರೆ ಎಂದು ತಿಳಿದುಬಂದಿದ್ದು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಟ್ ಅವರು ಎರಡು ಬಾರಿ ಪಕ್ಷದ ವಾರ್ಡ್‍ನಿಂದ ಆಯ್ಕೆಯಾಗಿದ್ದರು. ಜೊತೆಗೆ ಅವರ ಪತ್ನಿಯೂ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ಸ್ ಪಕ್ಷದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.