ನವದೆಹಲಿ: 'ಭಾರತದ ಇತರ ದೇಶಗಳ ನಡುವೆ ಪರಸ್ಪರ ತಿಳಿವಳಿಕೆ ಮತ್ತು ಅರ್ಥಮಾಡಿಕೊಳ್ಳುವ ನೀತಿಯಲ್ಲಿ ನಂಬಿಕೆ ಇಟ್ಟಿದೆ. ಆದರೆ, ಯಾರಾದರೂ ನಮ್ಮನ್ನು ಪರೀಕ್ಷಿಸಲು ಯತ್ನಿಸಿದರೆ, ಅದಕ್ಕೆ ತಕ್ಕ ಉತ್ತರವನ್ನು ನೀಡಲು ಹಿಂಜರಿಯುವುದಿಲ್ಲ' ಎಂದು ಪ್ರಧಾನಮಂತ್ರಿ ಮೋದಿ ಅವರು ಪರೋಕ್ಷವಾಗಿ ಚೀನಾ ಮತ್ತು ಪಾಕಿಸ್ತಾನಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನದ ಲಾಂಗ್‌ವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಶನಿವಾರ ಗಡಿ ಭದ್ರತಾ ಪಡೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಗಡಿಭಾಗಗಳಲ್ಲಿ ಬೆದರಿಕೆಯೊಡ್ಡುವ 'ವಿಸ್ತರಣಾವಾದಿ ಶಕ್ತಿ'ಗಳಿಗೆ ನಮ್ಮ ಸೈನಿಕರು ಉಗ್ರವಾದ ಉತ್ತರ ನೀಡುತ್ತಾರೆ ಎಂದೂ ಹೇಳಿದ್ದಾರೆ.
'ವಿಸ್ತರಣಾವಾದಿ ಶಕ್ತಿ' ಎಂಬುದು 18ನೇ ಶತಮಾನದ ಚಿಂತನೆ. ಈ ಚಿಂತನೆ ಒಂದು ರೀತಿ 'ಮಾನಸಿಕ ಅಸ್ಥಿರತೆ'. 'ಪ್ರಸ್ತುತ ಇಡೀ ವಿಶ್ವವೇ ಇಂಥ 'ವಿಸ್ತರಣಾವಾದಿ ಶಕ್ತಿಗಳಿಂದ ತೊಂದರೆ ಎದುರಿಸುತ್ತಿದೆ. ಭಾರತ ಈಗ ಅಂಥ ಚಿಂತನೆಯ ವಿರುದ್ಧ ಧ್ವನಿ ಎತ್ತುತ್ತಿದೆ' ಎಂದು ಪ್ರಧಾನಿ ಮೋದಿ ಹೇಳಿದರು.
'ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ಭಾರತ ಒಂದಿಷ್ಟೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇಡೀ ಜಗತ್ತು ಈಗ ಅರಿಯುತ್ತಿದೆ' ಎಂದು ಪ್ರಧಾನಿಯವರು, 'ನಿಮ್ಮ ಶೌರ್ಯದಿಂದಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ತಮ್ಮ ನಿಲುವು ಮತ್ತು ಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗಿದೆ' ಎಂದು 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಲಾಂಗ್‌ವಾಲಾ ನಡೆದ ಐತಿಹಾಸಿಕ ಯುದ್ಧವನ್ನು ನೆನಪಿಸಿದರು.