ಬೆಂಗಳೂರು: ಮಾದಕವಸ್ತು ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಬಿನೀಶ್ ಕೊಡಿಯೇರಿಯನ್ನು ವಶಕ್ಕೆ ತೆಗೆದುಕೊಂಡಿದೆ. ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನಂತರ ಎನ್‍ಸಿಬಿ ತಂಡ ಬಿನೀಶ್‍ನನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಬಿನೀಶ್ ಕೊಡಿಯೇರಿಯನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಿನೀಶ್ ಕೊಡಿಯೇರಿಯ ಕಸ್ಟಡಿ ಕೋರಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಿನ್ನೆ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ನ್ಯಾಯಾಲಯ ಸಮ್ಮತಿಯಂತೆ ಬಿನೀಶನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಮತ್ತು ಬಿನೀಶ್ ನ ಸ್ನೇಹಿತ ಮೊಹಮ್ಮದ್ ಅನೂಪ್ ನನ್ನು ಎನ್‍ಸಿಬಿ ಈ ಹಿಂದೆ ಬಂಧಿಸಿತ್ತು. ಇದರ ಬೆನ್ನಲ್ಲೇ, ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಬಿನೀಶ್ ಕೊಡಿಯೇರಿ ಹೆಸರು ಕೇಳಿಬಂದಿದ್ದರಿಂದ ತನಿಖೆ ಆರಂಭಿಸಲಾಯಿತು. ಈ ಪ್ರಕರಣದಲ್ಲಿ ಅನೂಪ್ ಮಾತ್ರವಲ್ಲದೆ ಎನ್‍ಸಿಬಿಯು ಚಲನಚಿತ್ರ ತಾರೆ ಸಂಜನಾ ಗಲ್ರಾನಿ ಮತ್ತು ಇತರರನ್ನು ಬಂಧಿಸಿತ್ತು.
ಈ ಹಿಂದೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಿನೀಶ್ ಕೊಡಿಯೇರಿಯನ್ನು ವಶಕ್ಕೆ ಕೋರಿತ್ತು, ಆದರೆ ಜಾರಿ ನಿರ್ದೇಶನಾಲಯವು ಆತನ ಬಂಧನವನ್ನು ವಿಸ್ತರಿಸುವಂತೆ ಕೇಳಿದ್ದರಿಂದ ವಿಳಂಬ ಉಂಟಾಗಿತ್ತು. ಇದನ್ನು ಅನುಸರಿಸಿ, ನಾರ್ಕೋಟಿಕ್ಸ್ ಬ್ಯೂರೋ ವಿನಂತಿಯನ್ನು ಹಿಂತೆಗೆದುಕೊಂಡಿತ್ತು. ಬಳಿಕ ನಿನ್ನೆ ಮತ್ತೆ ಅರ್ಜಿಯನ್ನು ಸಲ್ಲಿಸಿತ್ತು.