ಡಿಜಿಟಲ್ ಅಥವಾ ಆನ್ ಲೈನ್ ಮಾಧ್ಯಮ, ಆನ್ ಲೈನ್ ಚಲನಚಿತ್ರ, ಆನ್ ಲೈನ್ ಆಡಿಯೋ, ದೃಶ್ಯ ಮಾಧ್ಯಮ, ಆನ್ ಲೈನ್ ಸುದ್ದಿ, ಪ್ರಚಲಿತ ವಿದ್ಯಮಾನಗಳನ್ನು ಬಿತ್ತರಿಸುವ ಯಾವುದೇ ಆನ್ ಲೈನ್ ಮಾಧ್ಯಮವನ್ನು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಡಿಗೆ ತರುವ ಆದೇಶವನ್ನು ಸರ್ಕಾರ ಹೊರಡಿಸಿದೆ.
ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಯಾವುದೇ ನಿಯಮ, ಕಾನೂನು ಅಥವಾ ಸ್ವಾಯತ್ತ ಸರ್ಕಾರ ಸಂಸ್ಥೆಯು ಇಲ್ಲದಿರುವ ಹಿನ್ನೆಲೆಯಲ್ಲಿ, ಈ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶವು ಆನ್ ಲೈನ್ ನಲ್ಲಿ ತೆರೆ ಕಾಣುವ ಚಲನಚಿತ್ರಗಳು, ಆಡಿಯೋ ವಿಷುಯಲ್ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.
ಕಳೆದ ವರ್ಷ, ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಆದರೆ ಸದ್ಯಕ್ಕೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಇರುವಂತೆ ಆನ್ ಲೈನ್ ಮಾಧ್ಯಮಕ್ಕೂ ನಿಯಂತ್ರಣದ ಅವಶ್ಯಕತೆ ಇದೆ ಎಂದಿದ್ದಾರೆ.