ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 ಮುಗಿದ ಒಂದು ದಿನ ಬಳಿಕ ನಿಜವಾದ ಹೋರಾಟ ಆರಂಭವಾಗಿದೆ. ಈ ಬಾರಿ ಶ್ವೇತ ಭವನದ ಚುಕ್ಕಾಣಿ ಯಾರು ಹಿಡಿಯುತ್ತಾರೆ, ಜೊ ಬಿಡೆನ್ ನೇತೃತ್ವದ ಡೆಮಾಕ್ರಟ್ ಪಕ್ಷದ ನೀಲಿ ಅಲೆ ಶ್ವೇತಭವನವನ್ನು ಕಂಗೊಳಿಸುತ್ತದೆಯೇ ಅಥವಾ ಡೊನಾಲ್ಡ್ ಟ್ರಂಪ್ ನೇತೃತ್ವದ ಕೆಂಪು ಬಣ್ಣದ ರಿಪಬ್ಲಿಕನ್ ಪಕ್ಷ ಶ್ವೇತಭವನದಲ್ಲಿ ಮುಂದುವರಿಯುತ್ತದೆಯೇ ಎಂಬುದು ಸದ್ಯ ಇರುವ ಪ್ರಶ್ನೆಯಾಗಿದೆ.
ಡೆಮಾಕ್ರಟ್ಸ್ ಪಕ್ಷದ ಬಣ್ಣ ನೀಲಿ ಮತ್ತು ಪಕ್ಷದ ಗುರುತು ಕತ್ತೆಯಾಗಿದ್ದು, ರಿಪಬ್ಲಿಕನ್ ಪಕ್ಷದ್ದು ಕೆಂಪಾಗಿದೆ ಮತ್ತು ಪಕ್ಷದ ಚಿಹ್ನೆ ಆನೆ.
ಅಮೆರಿಕ ಅಧ್ಯಕ್ಷರಾಗಲು 270 ಸ್ಥಾನಗಳನ್ನು ಪಡೆಯಬೇಕು, ಜೊ ಬಿಡೆನ್ ಆ ಸಂಖ್ಯೆಗೆ ಸದ್ಯ ಸಮೀಪದಲ್ಲಿದ್ದಾರೆ.ಬಿಡೆನ್ 264 ಎಲೆಕ್ಟೊರಲ್ ಕಾಲೇಜು ಮತಗಳಲ್ಲಿ ಮುಂದಿದ್ದಾರೆ. ಅಮೆರಿಕದ ಪ್ರಸಿದ್ಧ ಮಿಚಿಗನ್ ಮತ್ತು ವಿಸ್ಕೊನ್ಸಿನ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಈಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 214 ಎಲೆಕ್ಟೊರಲ್ ಕಾಲೇಜ್ ಮತಗಳನ್ನು ಪಡೆದಿದ್ದು ವಿಸ್ಕೊನ್ಸಿನ್ ಕ್ಷೇತ್ರದಲ್ಲಿ ತಾವೇ ಗೆದ್ದಿದ್ದು ಎಂದು ಮೊದಲು ಘೋಷಿಸಿಕೊಂಡಿದ್ದರು, ನಂತರ ಜೊ ಬಿಡೆನ್ ಮುನ್ನಡೆ ಸಾಧಿಸಿದಾಗ ಬ್ಯಾಲೆಟ್ ಮತಗಳನ್ನು ಮತ್ತೆ ಎಣಿಕೆ ಮಾಡಬೇಕೆಂದು ಚುನಾವಣೆಯಲ್ಲಿ, ಮತದಾನದಲ್ಲಿ ವಿರೋಧ ಪಕ್ಷ ಅಕ್ರಮ ಎಸಗಿದೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಲು ಟ್ರಂಪ್ ನಿರ್ಧರಿಸಿದ್ದಾರೆ.
ಇದೀಗ ಎಲ್ಲರ ಚಿತ್ತ ಜಾರ್ಜಿಯಾ, ಪೆನ್ಸಿಲ್ವೇನಿಯಾ, ನೆವಾಡಾ ಮತ್ತು ಉತ್ತರ ಕೆರೊಲಿನಾ ರಾಜ್ಯಗಳ ಮೇಲಿದ್ದು ಅಲ್ಲಿ ಮತ ಎಣಿಕೆ ಇನ್ನೂ ಪ್ರಗತಿಯಲ್ಲಿದೆ. ಇನ್ನು ಭಾರತೀಯ ಮೂಲದ 1.9 ಅರ್ಹ ಮತದಾರರು ಚೆನ್ನೈ ಮೂಲದ ಕಮಲಾ ಹ್ಯಾರಿಸ್ ಮತ್ತು ಜೊ ಬಿಡೆನ್ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಅವರ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ತೀವ್ರ ಪೈಪೋಟಿ ನಡೆಸುತ್ತಿದ್ದು ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎನ್ನುವುದು ಈಗಿರುವ ಕುತೂಹಲ.