ನವದೆಹಲಿ : ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿ ಲಂಚದ ಪ್ರಮಾಣ ಅಧಿಕ. ಸರ್ಕಾರಿ ಸೇವೆ ಪಡೆದುಕೊಳ್ಳಲು ಇಲ್ಲಿ ಬಹುತೇಕ ಜನರು ವ್ಯಕ್ತಿಗತ ಸಂಪರ್ಕದ ನೆರವು ಪಡೆಯುತ್ತಾರೆ!
ಭ್ರಷ್ಟಾಚಾರ ಸ್ವರೂಪದ ಮೇಲಿನ ಕಣ್ಗಾವಲು ಸಂಸ್ಥೆ 'ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್'ನ ನೂತನ ವರದಿಯಲ್ಲಿ ಈ ಅಂಶಗಳು ವ್ಯಕ್ತವಾಗಿವೆ. ಭ್ರಷ್ಟಾಚಾರ ಕುರಿತು ಜಾಗತಿಕ ಮಾನದಂಡ (ಜಿಸಿಬಿ) ಅನುಸಾರ, ಏಷ್ಯಾದಲ್ಲಿ ಶೇ 50ರಷ್ಟು ಮಂದಿ ಲಂಚ ನೀಡಿದರೆ, ಶೇ 32ರಷ್ಟು ಜನರು ವೈಯಕ್ತಿಕ ಸಂಪರ್ಕದ ಲಾಭದ ನೆರವಿನಲ್ಲಿ ಸರ್ಕಾರಿ ಸೇವೆ ಪಡೆಯುತ್ತಾರೆ.
ಭಾರತದಲ್ಲಿ ಈ ವರ್ಷದ ಜೂನ್ 17ರಿಂದ ಜುಲೈ 17ರವರೆಗಿನ ಸಮೀಕ್ಷೆಯ ಅಂಶಗಳನ್ನು ವರದಿ ಆಧರಿಸಿದ್ದು, ಸುಮಾರು 2000 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಭಾರತದಲ್ಲಿ ಲಂಚ ರೂಪದಲ್ಲಿ ನಡೆಯುವ ಭ್ರಷ್ಟಾಚಾರದ ಪ್ರಮಾಣ ಶೇ 39ರಷ್ಟಿದೆ. ವೈಯಕ್ತಿಕ ಸಂಪರ್ಕದ ಪ್ರಭಾವ ಬಳಸಿ ಸೇವೆಯನ್ನು ಪಡೆಯುವವರ ಪಟ್ಟಿಯಲ್ಲಿಯೂ (ಶೇ 46) ಭಾರತವೇ ಮೊದಲಿದೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಒಂದು ಪಿಡುಗಾಗಿ ಮುಂದುವರಿದಿದೆ. ನಿಧಾನಗತಿ ಮತ್ತು ಸಂಕೀರ್ಣವಾದ ಆಡಳಿತ ವ್ಯವಸ್ಥೆ, ಪ್ರಭಾವಿಗಳಿಗೆ ಅನಗತ್ಯವಾಗಿ ಮಣೆ ಹಾಕುವುದು, ಅಸ್ಪಷ್ಟವಾದ ನಿಯಂತ್ರಣ ನಿಯಮಗಳ ಪರಿಣಾಮವಾಗಿ ಜನರು ಸುಲಭವಾಗಿ ಸೇವೆ ಪಡೆಯಲು ಪರ್ಯಾಯ ಮಾರ್ಗ ಅನುಸರಿಸುತ್ತಾರೆ. ಆ ಮಾರ್ಗವೇ ಲಂಚ.
ಭ್ರಷ್ಟಾಚಾರ ತಡೆಯಲು ಕೈಗೊಂಡ ಕ್ರಮಗಳ ಸಂಖ್ಯೆ ಕಡಿಮೆ ಇದೆ. ಭಾರತದಲ್ಲಿ ಬಹುಸಂಖ್ಯಾತ ನಾಗರಿಕರು (ಶೇ 63) ಒಂದು ವೇಳೆ ಭ್ರಷ್ಟಾಚಾರ ಕುರಿತು ದೂರು ನೀಡಿದರೆ ಪ್ರತಿಕೂಲ ಪರಿಣಾಮಗಳಿಗೆ ತುತ್ತಾಗಬೇಕಾದಿತು ಎಂದು ಹೆದರುತ್ತಾರೆ.
ಹಲವು ರಾಷ್ಟ್ರಗಳಲ್ಲಿ ಅಂದರೆ ಭಾರತ, ಮಲೇಷಿಯಾ, ಥಾಯ್ಲೆಂಡ್, ಶ್ರೀಲಂಕಾ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಅಧಿಕವಾಗಿವೆ. ಭ್ರಷ್ಟಾಚಾರದ ನಿಯಂತ್ರಣ ಕ್ರಮವಾಗಿ ಇಂತಹ ಪ್ರಕರಣಗಳಿಗೂ ಕಡಿವಾಣ ಹಾಕುವುದು ಅಗತ್ಯವಾಗಿದೆ.
ಭಾರತದಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರವೇ ದೊಡ್ಡ ಪಿಡುಗಾಗಿದೆ. ಶೇ 18ರಷ್ಟು ಪ್ರಕರಣಗಳಲ್ಲಿ ಮತಗಳಿಕೆ ತಂತ್ರವಾಗಿ ಲಂಚ ಕೊಡುತ್ತಾರೆ.
ಇದೇ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಶೇ 63ರಷ್ಟು ಜನರು ಹೇಳಿದರೆ, ಶೇ 73ರಷ್ಟು ಜನರು, ಪಿಡುಗು ತಡೆಗೆ ಭ್ರಷ್ಟಾಚಾರ ವಿರೋಧಿ ದಳದ ಪಾತ್ರ ಪರಿಣಾಮಕಾರಿ ಎಂದಿದ್ದಾರೆ.
ವಿವಿಧ 17 ದೇಶಗಳಲ್ಲಿ ಒಟ್ಟಾರೆ 20,000 ಜನರನ್ನು ಸಮೀಕ್ಷೆಗೆ ಒಳಪಡಿಸಿದೆ. ಪ್ರತಿ ನಾಲ್ವರಲ್ಲಿ ಮೂವರು ತಮ್ಮ ದೇಶದಲ್ಲಿ ಭ್ರಷ್ಟಾಚಾರವೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಪ್ರತಿ ಐವರಲ್ಲಿ ಒಬ್ಬರು ಸರ್ಕಾರಿ ಸೇವೆ ಪಡೆಯಲು ಲಂಚ ನೀಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಭಾರತದ ನಂತರದ ಸ್ಥಾನದಲ್ಲಿ ಕಾಂಬೋಡಿಯ (ಶೇ 37), ಇಂಡೋನೇಷ್ಯಾ (ಶೇ 30) ಇದ್ದರೆ, ಮಾಲ್ಡೀವ್ಸ್ ಮತ್ತು ಜಪಾನ್ (ತಲಾ ಶೇ 2) ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿವೆ.
ಈ ರಾಷ್ಟ್ರಗಳಲ್ಲಿ ಒಟ್ಟಾರೆಯಾಗಿ ಸಾರ್ವಜನಿಕ ಸೇವೆಗಳನ್ನು ಪಡೆಯಲು ಲಂಚ ನೀಡಬೇಕಾದ ಪಿಡುಗು ಹತ್ತಿಕ್ಕಲು ಸರ್ಕಾರವೇ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿಯು ಅಭಿಪ್ರಾಯಪಟ್ಟಿದೆ.