ಭೋಪಾಲ್: ಮಧ್ಯಪ್ರದೇಶ ಸರ್ಕಾರವು ಗೋವು ಸಚಿವಾಲಯ ರಚಿಸುವ ಮೂಲಕ ದೇಶದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, 'ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಗೋವುಗಳಿಗೆ ಆಶ್ರಯ ತಾಣಗಳನ್ನು ನಿರ್ಮಿಸುತ್ತೇವೆ ಎಂದು 15 ತಿಂಗಳಿಂದ ಹೇಳುತ್ತಲೇ ಇದ್ದವು. ಆದರೆ, ಅವರಿಗೆ ಕೇವಲ 15 ಆಶ್ರಯ ತಾಣಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಈಗ ಮಧ್ಯಪ್ರದೇಶ ಸರ್ಕಾರವು ಗೋವು ಸಚಿವಾಲಯ ರಚಿಸುವ ಮೂಲಕ ಹೊಸ ಸಂಪ್ರದಾಯವನ್ನು ದೇಶದ ಮುಂದಿರಿಸಿದೆ' ಎಂದು ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜಾನುವಾರು ರಕ್ಷಣೆಗೆ 'ಗೋವು ಸಚಿವಾಲಯ' ರಚಿಸಲು ಮಧ್ಯಪ್ರದೇಶ ಸರ್ಕಾರ ಬುಧವಾರ ನಿರ್ಧರಿಸಿದೆ.
ಪಶುಸಂಗೋಪನೆ, ಅರಣ್ಯ, ಪಂಚಾಯತ್, ಗ್ರಾಮೀಣಾಭಿವೃದ್ಧಿ, ಗೃಹ ಮತ್ತು ರೈತ ಕಲ್ಯಾಣ ಇಲಾಖೆಗಳು 'ಗೋವು ಸಚಿವಾಲಯ'ದ ಒಂದು ಭಾಗವಾಗಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.