ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಅವರದ್ದೆನ್ನಲಾದ ಆಡಿಯೋವೊಂದು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಅದರಲ್ಲಿ ಕತ್ತಲ್‍ಸಾರ್ ಅವರು ತುಳು ರಾಜ್ಯ ಹೋರಾಟಕ್ಕೆ ಉಗ್ರ ರೀತಿಯ ಹೋರಾಟದ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನು ಕತ್ತಲ್‍ಸಾರ್ ನಿರಾಕರಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕತ್ತಲ್‍ಸಾರ್ ಅವರು 'ಕೆಲವು ದಿನಗಳ ಹಿಂದೆ ನನ್ನನ್ನು ಭೇಟಿಯಾಗಿದ್ದ ಒಂದು ತುಳು ಸಂಘಟನೆಯವರು ಪ್ರತ್ಯೇಕ ತುಳು ರಾಜ್ಯ ಹೋರಾಟದ ಬಗ್ಗೆ ಮಾತನಾಡಿದ್ದರು. ನಾನು ಉಗ್ರ ರೀತಿಯ ಹೋರಾಟಕ್ಕೆ ಬೆಂಬಲ ನೀಡಲಾಗದು. ತುಳು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕು ಎಂಬುದು ನಮ್ಮ ಪ್ರಯತ್ನ ಎಂದಿದ್ದೆ. ಅಲ್ಲದೆ ಇದೇ ಸಂದರ್ಭದಲ್ಲಿ ತೆಲಂಗಾಣದಲ್ಲಿ ನಡೆದ ಹೋರಾಟ ಉಲ್ಲೇಖಿಸಿದ್ದೆ. ಆದರೆ ಅದನ್ನು ಎಡಿಟ್ ಮಾಡಿ ಅಸ್ಪಷ್ಟ ವೀಡಿಯೋ ಹರಿಯಬಿಡಲಾಗಿದೆ. ಇದಕ್ಕೂ ಮೊದಲು ವೀಡಿಯೋ ಹರಿಯಬಿಡುವ ಬಗ್ಗೆ ಬೆದರಿಕೆ ಕೂಡ ಬಂದಿತ್ತು. ಅಕಾಡೆಮಿ ಅಧ್ಯಕ್ಷನಾಗಿ ನನಗೆ ಜವಾಬ್ದಾರಿ ಇದೆ. ತುಳುವಿಗಾಗಿ ಮಾಡುವ ಒಳ್ಳೆಯ ಕೆಲಸಗಳಿಗೆ, ಶಾಂತಿಯುತ ಪ್ರಯತ್ನಗಳಿಗೆ ಅಕಾಡೆಮಿಯ ವ್ಯಾಪ್ತಿಯಲ್ಲಿ ಬೆಂಬಲ ನೀಡಬಹುದು. ಆದರೆ ಪ್ರತ್ಯೇಕ ರಾಜ್ಯ ಸ್ಥಾಪನೆ ಹೋರಾಟಕ್ಕೆ ಬೆಂಬಲ ನೀಡಲಾಗದು' ಎಂದು ಪ್ರತಿಕ್ರಿಯಿಸಿದ್ದಾರೆ.
ನನ್ನ ಮೇಲೆ ಈ ಕಾರಣಕ್ಕಾಗಿ ದ್ವೇಷವಿದ್ದವರು ಉದ್ದೇಶ ಪೂರ್ವಕವಾಗಿ ರೆಕಾರ್ಡ್ , ಎಡಿಟ್ ಮಾಡಿ ವೀಡಿಯೋ ಹರಿಯಬಿಟ್ಟಿದ್ದಾರೆ ಎಂದು ಕತ್ತಲ್ ಸಾರ್ ಪ್ರತಿಕ್ರಿಯಿಸಿದ್ದಾರೆ.