ನವದೆಹಲಿ: ಭಯೋತ್ಪಾದನೆ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಉಗ್ರರಿಗೆ ಸಹಾಯ ಮಾಡುವ ದೇಶಗಳನ್ನು ತಪ್ಪಿತಸ್ಥರನ್ನಾಗಿ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 12ನೇ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನು ಒಗ್ಗಟ್ಟಾಗಿ ಎದುರಿಸುವ ಅಗತ್ಯ ಇದೆ. ಭಯೋತ್ಪಾದನೆ, ಉಗ್ರ ಸಂಘಟನೆಗಳನ್ನು ಬೆಂಬಲಿಸುವ ರಾಷ್ಟ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊಣೆಗಾರರನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳು ಒಟ್ಟಿಗೆ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಈ ಮೂಲಕ ಮೋದಿ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು,
ನಮ್ಮ ದೇಶದ ಫಾರ್ಮಾ ಇಂಡಸ್ಟ್ರಿಯ ಸಾಮಥ್ರ್ಯದಿಂದಾಗಿ ಕೊರೋನಾ ಸಮಯದಲ್ಲಿ 150 ದೇಶಗಳಿಗೆ ಔಷಧಿಗಳನ್ನು ನೀಡಿದ್ದೇವೆ. ನಮ್ಮ ವ್ಯಾಕ್ಸಿನ್ ಉತ್ಪಾದನೆ ಮತ್ತು ಡೆಲಿವರಿ ಸಾಮಥ್ರ್ಯವೂ ಸಹ ಮಾನವೀಯ ಗುಣದಿಂದ ಕೆಲಸ ಮಾಡಲಿದೆ. ಎಂದು ಪ್ರಧಾನಿ ಮೋದಿ ಹೇಳಿದರು.
ಈ ವರ್ಚುಯಲ್ ಶೃಂಗ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಮುಖಂಡರು ಪಾಲ್ಗೊಂಡಿದ್ದರು. ಎಸ್ ಸಿ ಒ ಶೃಂಗಸಭೆ ನಂತರ ಇದೇ ಮೊದಲ ಬಾರಿಗೆ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರು ವರ್ಚುವಲ್ ವೇದಿಕೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.