ಕೊಚ್ಚಿ: ಮೇಲುಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಐಯುಎಂಎಲ್ ಪಕ್ಷದ ಶಾಸಕ ವಿ.ಕೆ. ಇಬ್ರಾಹಿಂ ಕುಂಜು ಅವರನ್ನು ಜಾಗೃತಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಅವಧಿಯಲ್ಲಿ ಈ ಮೇಲುಸೇತುವೆ ನಿರ್ಮಾಣವಾಗಿದ್ದು, ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಲಾಗಿತ್ತು. ಈ ನಿರ್ಮಾಣ ಕಾಮಗಾರಿಯಲ್ಲಿ ಅಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಇಬ್ರಾಹಿಂ ಕುಂಜು ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಜಾಗೃತಿ ದಳದ ಅಧಿಕಾರಿಗಳು, ಅನಾರೋಗ್ಯ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಕುಂಜು ಅವರನ್ನು ಆಸ್ಪತ್ರೆಯಲ್ಲೇ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಬಂಧಿಸುವ ಮುನ್ನ ಜಾಗೃತಿ ದಳದವರು ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.