ಮಂಜೇಶ್ವರ: ಅಮಿತ ವೇಗದಿಂದ ಆಗಮಿಸಿದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ತರಕಾರಿ ಮಾರಾಟದ ಗೂಡಂಗಡಿಗೆ ನುಗ್ಗಿ ಸಮೀಪದಲ್ಲಿದ್ದ ಬೈಕನ್ನು ಕೂಡಾ ನುಜ್ಜುಗುಜ್ಜಾಗಿಸಿದ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಉದ್ಯಾವರ ಇರ್ಷಾದ್ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ.
ಉಳ್ಳಾಲ ಮಾರ್ಗತಲ ನಿವಾಸಿ ಸಿದ್ದೀಖ್ (50) ಗಂಭೀರ ಗಾಯಗೊಂಡ ವ್ಯಕ್ತಿ. ಇವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಗುಜರಿ ಅಂಗಡಿ ವ್ಯಾಪಾರಿಯಾಗಿರುವ ಸಿದ್ದೀಖ್ ಕೆಲಸ ನಿಮಿತ್ತ ಉದ್ಯಾವರಕ್ಕೆ ಆಗಮಿಸಿದ್ದರು. ಅಪಘಾತಕ್ಕಿಡಾದ ಕಾರು ಕಾಸರಗೊಡು ನಿವಾಸಿಗಳಾಗಿದ್ದು, ಚಾಲಕ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿದ್ದನೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಕಾರಿನ ಚಾಲಕ ಮದ್ಯ ಸೇವಿಸಿರುವ ಬಗ್ಗೆ ಪೆÇಲೀಸರೂ ಶಂಕೆ ವ್ಯಕ್ತಪಡಿಸಿದ್ದು, ವೈದ್ಯಕೀಯ ತಪಾಸಣೆಯ ಬಳಿಕ ಖಚಿತಪಡಿಸುವುದಾಗಿ ಹೇಳಿದ್ದಾರೆ. ಕುಂಜತ್ತೂರು ನಿವಾಸಿ ನಿಝಾರ್ ಎಂಬವರ ತರಕಾರಿ ಗೂಡಂಗಡಿ ಸಂಪೂರ್ಣವಾಗಿ ಹಾನಿಯಾಗಿದ್ದು, 50 ಸಾವಿರ ರೂ. ನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ.