ನವದೆಹಲಿ: ಗಡಿ ವಾಸ್ತವ ರೇಖೆ(ಎಲ್ ಒ ಸಿ)ಯ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ.
ಪೂರ್ವ ಲಡಾಕ್ ನ ಗಡಿ ರೇಖೆ ಬಳಿ ಭಾರತೀಯ ಸೇನಾಪಡೆ ನೀಡುತ್ತಿರುವ ದಿಟ್ಟ ಪ್ರತಿಕ್ರಿಯೆಯಿಂದಾಗಿ ಚೀನಾ ಅನಿರೀಕ್ಷಿತ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ನಮ್ಮ ಸೇನಾ ನಿಲುಗಡೆ ಅಲ್ಲಿ ನಿಸ್ಸಂದಿಗ್ಧವಾಗಿದ್ದು, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಾವುದೇ ಬದಲಾವಣೆಯನ್ನು ನಾವು ಒಪ್ಪುವುದಿಲ್ಲ ಎಂದು ಜ.ಬಿಪಿನ್ ರಾವತ್ ಹೇಳಿದ್ದಾರೆ. ಚೀನಾದಿಂದ ಗಡಿಯಲ್ಲಿ ಮುಖಾಮುಖಿ ಮತ್ತು ಅಪ್ರಚೋದಿತ ಕ್ರಮಗಳು ನಮ್ಮ ನಿಲುವಿನಲ್ಲಿ ಯಾವುದೇ ರೀತಿಯಲ್ಲಿಯೂ ಸಡಿಲಿಕೆ ಮಾಡಲಾಗದಷ್ಟು ಮಟ್ಟಿಗೆ ಸಂಘರ್ಷಕ್ಕೆ ತಿರುಗುತ್ತಿದೆ ಎಂದು ಹೇಳಿದರು.
ಭಾರತ-ಚೀನಾ ಮಧ್ಯೆ ಗಡಿ ಸಂಘರ್ಷ ಆರಂಭವಾಗಿ ಆರು ತಿಂಗಳುಗಳು ಕಳೆದಿದೆ. ಕಳೆದ ಆಗಸ್ಟ್ 29 ಮತ್ತು ಸೆಪ್ಟೆಂಬರ್ 8ರ ಮಧ್ಯೆ ಉತ್ತಮ ಮತ್ತು ದಕ್ಷಿಣ ತೀರದ ಪಾಂಗಾಂಗ್ ಲೇಕ್ ಮಧ್ಯೆ ಗಡಿ ರೇಖೆಯುದ್ದಕ್ಕೂ ಚೀನಾ ಸೇನೆ ಸಂಘರ್ಷಕ್ಕೆ ಮುಂದಾಗಿದ್ದರಿಂದ ಭಾರತೀಯ ಸೇನೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗಿ ಬಂದಿದ್ದು ಎರಡೂ ದೇಶಗಳ ನಡುವಣ ಸಂಬಂಧ ತೀರಾ ಹದಗೆಟ್ಟಿದೆ ಎನ್ನಬಹುದು. ಕಳೆದ 45 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಗಾಳಿಯಲ್ಲಿ ಸಹ ಗುಂಡು ಹಾರಿಸಲಾಗಿದೆ.