ತಿರುವನಂತಪುರ: ಚಪಾತಿ ಮತ್ತು ಬಿರಿಯಾಣಿಯ ಬಳಿಕ ಇನ್ನು ಜೈಲಿನಿಂದ ಬೂಟುಗಳೂ ಮಾರುಕಟ್ಟೆಗೆ ಬರಲಿವೆ. ಕೈದಿಗಳು ತಯಾರಿಸಿರುವ ಫ್ರೀಡಂ ವಾಕ್ ಹವಾಯಿ ಚಪ್ಪಲಿಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ ಲಭ್ಯವಾಗಲಿದೆ. ಜೊತೆಗೆ ಜೈಲಿನ ಖೈದಿಗಳು ನಿರ್ಮಿಸುತ್ತಿರುವ ಈ ಚಪ್ಪಲಿಗಳು ಮಾರುಕಟ್ಟೆಯಲ್ಲಿನ ಇತರ ಚಪ್ಪಲಿಗಳಿಗಿಂತ ಅಗ್ಗದ ದರದಲ್ಲಿ ಮಾರಾಟಗೈಯ್ಯಲಾಗುವುದು ವಿಶೇಷತೆಯಾಗಿದೆ. ಆದರೆ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಫ್ರೀಡಂ ವಾಕ್ ಹವಾಯಿ ಚಪ್ಪಲಿಗಳನ್ನು ಮಾರುಕಟ್ಟೆಗೆ ಶನಿವಾರ ಜೈಲಿನ ಡಿಜಿಪಿ ರಿಷಿರಾಜ್ ಸಿಂಗ್ ಉದ್ಘಾಟಿಸಿ ಚಾಲನೆ ನೀಡಿದರು. ಕೈದಿಗಳಿಗೆ ಉದ್ಯೋಗ ತರಬೇತಿ ನೀಡಲು ಹೊಸ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು ಅದರ ಭಾಗವಾಗಿ ಇಂತಹದೊಂದು ನವೀನ ಪರಿಕಲ್ಪನೆ ಜಾರಿಗೆ ಬರುತ್ತಿದೆ. ಚಪ್ಪಲಿ ನಿರ್ಮಿಸುವ ಯಂತ್ರೋಪಕರಣಗಳು ಮತ್ತು ಕಚ್ಚಾ ವಸ್ತುಗಳನ್ನು 2 ಲಕ್ಷ ರೂ. ಗಳಿಗೆ ತಿರುವನಂತಪುರ ಜೈಲಿಗೆ ಒದಗಿಸಲಾಗಿದೆ. ದಿನಕ್ಕೆ 500 ಚಪ್ಪಲಿಗಳನ್ನು ತಯಾರಿಸಬಹುದು ಎನ್ನುವುದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದು ಕೈದಿಗಳು ಶೂ ತಯಾರಿಕೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜೈಲು ಅಧಿಕಾರಿಗಳ ಮೇಲ್ವಿಚಾರಣೆಯೂ ಇರಲಿದೆ. ಯೋಜನೆ ಯಶಸ್ವಿಯಾದರೆ ರಾಜ್ಯದ ಇತರ ಜೈಲುಗಳಿಗೂ ಇಂತಹ ನವೀನ ಯೋಜನೆಗಳು ವಿಸ್ತರಣೆಯಾಗಲಿದೆ ಎಂಬುದು ಅಧಿಕೃತರ ಚಿಂತನೆಯಾಗಿದೆ.