ನವದೆಹಲಿ: ಭಾರತದಲ್ಲಿ 'ಜಾಗತಿಕ ಪಾರಂಪರಿಕ ಔಷಧೀಯ ಕೇಂದ್ರ'ವನ್ನು ಸ್ಥಾಪಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
5 ನೇ ಆಯುರ್ವೇದ ದಿನದ ಅಂಗವಾಗಿ ಜೈಪುರ ಮತ್ತು ಜಾಮ್‌ನಗರದಲ್ಲಿ ಭವಿಷ್ಯದಲ್ಲಿ ತಲೆ ಎತ್ತಲಿರುವ ಎರಡು ಆಯುರ್ವೇದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸುವ ಕಾರ್ಯಕ್ರಮದಲ್ಲಿ, ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸ್ ಅವರು ವಡಿಯೊ ಸಂದೇಶದ ಮೂಲಕ ಈ ಪ್ರಕಟಣೆ ಕಳುಹಿಸಿದರು.
'ಪಾರಂಪರಿಕ ಹಾಗೂ ಪೂರಕ ಔಷದಗಳ ಬಗ್ಗೆ ಪುರಾವೆ, ಸಂಶೋಧನೆ, ತರಬೇತಿ ಮತ್ತು ಅರಿವು ಮೂಡಿಸುವುದಕ್ಕಾಗಿ ಜಾಗತಿಕ ಪಾರಂಪರಿಕ ಔಷಧೀಯ ಕೇಂದ್ರವನ್ನು ತೆರೆಯಲು ನಾವು ಭಾರತವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತೋಷವಾಗಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸ್ ತಿಳಿಸಿದರು.
'ಈ ಹೊಸ ಕೇಂದ್ರವು 2014-2023ರ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅನುಷ್ಠಾನಗೊಳಿಸಲಿರುವ ಸಾಂಪ್ರದಾಯಿಕ ಔಷಧಗಳ ತಂತ್ರಗಳನ್ನು ಬೆಂಬಲಿಸಲಿದೆ. ಜತೆಗೆ ನೀತಿಗಳನ್ನು ರೂಪಿಸುವುದು, ಕ್ರಿಯಾ ಯೋಜನೆ ಸಿದ್ಧಗೊಳಿಸುವುದು ಸೇರಿದಂತೆ ವಿವಿಧ ಹಂತಗಳಲ್ಲಿ ಕೇಂದ್ರ ನೆರವು ನೀಡಲಿದೆ' ಎಂದು ಅವರು ತಿಳಿಸಿದರು.
ವಿಶ್ವ ಸಂಸ್ಥೆಯ ಈ ಕ್ರಮಕ್ಕೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ ಅವರು, 'ವಿಶ್ವ ಸಂಸ್ಥೆ ಇಂಥ ಕಾರ್ಯಗಳ ಮೂಲಕ ಜಾಗತಿಕ ಕಲ್ಯಾಣ ಕೇಂದ್ರವಾದರೆ, ಭಾರತವು 'ವಿಶ್ವದ ಔಷಧಾಲಯ'ವಾಗಿ ರೂಪುಗೊಳ್ಳಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ಡಬ್ಲ್ಯುಎಚ್‌ಒ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ' ಎಂದು ಹೇಳಿದರು.