ಇನ್ಸುಲಿನ್ ಮತ್ತು ಇನಹೇಲರ್‌ಗಳೂ ಇನ್ನು ಮುಂದೆ ಅಮೇಜಾನ್‌ನಲ್ಲಿ ಮಾರಾಟವಾಗಲಿವೆ.
ಮಂಗಳವಾರ ಆನ್‌ಲೈನ್ ಔಷಧಾಲಯಕ್ಕೆ ಚಾಲನೆ ನೀಡಿದ ಅಮೇಜಾನ್, ಗ್ರಾಹಕರಿಗೆ ಔಷಧಿಗಳನ್ನು ಇತರ ವಸ್ತುಗಳಂತೆ ತಮ್ಮ ಮನೆ ಬಾಗಿಲಿಗೆ ಪಡೆಯುವ ಸೇವೆಯನ್ನು ಆರಂಭಿಸಿದೆ.
ಅಮೇಜಾನ್‌ನ ಈ ನಿರ್ಧಾರ ಔಷಧ ವಲಯದ ಅಚ್ಚರಿಗೆ ಕಾರಣವಾಗಿದ್ದು ಈ ಹಿಂದೆ ಪುಸ್ತಕದಿಂದ ಹಿಡಿದು ರೇಷನ್‌ವರೆಗೂ ಎಲ್ಲ ವಲಯಗಳಿಗೂ ಹಬ್ಬಿದಾಗಲೂ ಹೀಗೆಯೆ ಆಗಿತ್ತು. ಸಿವಿಎಸ್ ಮತ್ತು ವಾಲ್‌ಗ್ರೀನ್ಸ್‌ನಂತಹ ದೊಡ್ಡ ಚೈನ್‌ಗಳು ಗ್ರಾಹಕರಿಗೆ ಔಷಧಿ ಸರಬರಾಜು ಮಾಡಲು ಫಾರ್ಮಸಿಗಳನ್ನು ಅವಲಂಬಿಸಿವೆ.
ಅಮೇಜಾನ್ ಮಂಗಳವಾರದಿಂದ ಇನ್ಸುಲಿನ್, ಕ್ರೀಮ್, ಗುಳಿಗೆ ಸೇರಿದಂತೆ ಸಾಮಾನ್ಯವಾಗಿ ವೈದ್ಯರು ಬರೆಯುವ ಔಷಧಗಳು ಸಿಗಲಿವೆ ಎಂದು ಹೇಳಿಕೊಂಡಿದೆ.
ಗ್ರಾಹಕರು ಅಮೇಜಾನ್‌ನಲ್ಲಿ ಖಾತೆ ತೆರೆದು ವೈದ್ಯರು ನೀಡಿದ ಔಷಧ ಚೀಟಿಯನ್ನು ಕಳುಹಿಸಬೇಕಾಗುತ್ತದೆ.
ಬಹುತೇಕ ವಿಮೆಗಳನ್ನು ಸ್ವೀಕರಿಸಲಾಗುತ್ತದೆ. ಆದರೆ ವಿಮೆ ಇಲ್ಲದ ಪ್ರೈಮ್ ಸದಸ್ಯರು ಜೆನೆರಿಕ್ ಅಥವಾ ಬ್ರ್ಯಾಂಡ್ ಔಷಧಿಗಳನ್ನು ರಿಯಾಯತಿ ದರದಲ್ಲಿ ಪಡೆಯಬಹುದು ಎಂದು ಅಮೇಜಾನ್ ತಿಳಿಸಿದೆ.
ತುಂಬಾ ದಿನದಿಂದ ಅಮೇಜಾನ್ ಔಷಧ ಲೋಕಕ್ಕೆ ಕಾಲಿಡಲು ಪ್ರಯತ್ನಿಸುತ್ತಿತ್ತು. ಎರಡು ವರ್ಷದ ಹಿಂದೆ ಔಷಧಿ ತೆಗೆದುಕೊಳ್ಳುವ ಸಮಯಕ್ಕೆ ಸರಿಯಾಗಿ ಅದನ್ನು ಪ್ಯಾಕ್ ಮಾಡಿ ತಲುಪಿಸುವ ಪಿಲ್‌ಪ್ಯಾಕ್ ಎಂಬ ಆನ್‌ಲೈನ್ ಫಾರ್ಮಸಿಯನ್ನು 750 ಮಿಲಿಯನ್ ಖರ್ಚು ಮಾಡಿ ಖರೀದಿಸಿತ್ತು. ಅಮೇಜಾನ್ ತನ್ನ ಗಮನ ದೀರ್ಘಕಾಲದ ಸಮಸ್ಯೆಯಿಂದ ಬಳಲುವ ಜನರಿಗೆ ಔಷಧಿ ನೀಡುವುದರ ಮೇಲಿದೆ ಎಂದಿದೆ.
ಕೋವಿಡ್-19 ನಡುವೆ ಎಲ್ಲರ ಗಮನ ಸೆಳೆದಿದ್ದ ಆನ್‌ಲೈನ್ ಔಷಧ ಉದ್ಯಮಕ್ಕೆ ಕಳೆದ ಅಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಅಮೇಜಾನ್ ಫಾರ್ಮಸಿ ಪ್ರಾರಂಭಿಸಿ ಅಮೇಜಾನ್ ಪ್ರವೇಶ ಮಾಡಿದೆ.
“ನಮ್ಮ ಗ್ರಾಹಕರ ಅಗತ್ಯತೆಗಳನ್ನು ನೀಗಿಸುವುದಕ್ಕಾಗಿ ನಾವು ಬೆಂಗಳೂರಿನಲ್ಲಿ ಅಮೇಜಾನ್ ಫಾರ್ಮಸಿಯನ್ನು ಪ್ರಾರಂಭಿಸುತ್ತಿದ್ದೇವೆ, ಇಲ್ಲಿ ಗ್ರಾಹಕರು ವೈದ್ಯರ ಚೀಟಿ ನೀಡಿ ಔಷಧಿಗಳನ್ನು ಆರ್ಡರ್ ಮಾಡಬಹುದು ಜತೆಗೆ ಮಳಿಗೆಯಲ್ಲಿಯೂ ಔಷಧಿಗಳನ್ನು, ಮೂಲಭೂತ ಆರೋಗ್ಯ ಸಾಧನಗಳು ಮತ್ತು ಆಯುರ್ವೇದಿಕ್ ಔಷಧಿಗಳನ್ನು ಪ್ರಮಾಣೀತ ಮಾರಾಟಗಾರರಿಂದ ಪಡೆಯಬಹುದು,” ಎಂದು ಅಮೇಜಾನ್‌ನ ವಕ್ತಾರರು ತಿಳಿಸಿದರು.ಇ-ಔಷಧಾಲಯಗಳು ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಆಧರಿಸಿದ ಔಷಧ ಮಾರಾಟ ಮಾಡಲು ಕೇಂದ್ರ ಪರವಾನಗಿ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕಾಗುತ್ತದೆ. ಪರವಾನಗಿ ಹೊಂದಿರುವ ಭಾರತೀಯ ವರ್ತಕರೊಂದಿಗೆ ಅಮೇಜಾನ್ ಪಾಲುದಾರಿಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.