ನವದೆಹಲಿ: ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಘೋಷಿಸುವ ವಿಚಾರದಲ್ಲಿ ಏಕರೂಪತೆ ತರಲು, ಸಮಗ್ರವಾದ ಮಾರ್ಗಸೂಚಿಯೊಂದನ್ನು ಸುಪ್ರೀಂ ಕೋರ್ಟ್ ಬುಧವಾರ ಜಾರಿಗೊಳಿಸಿದೆ.
ಪರಿಹಾರ ಮೊತ್ತವನ್ನು ಅರ್ಜಿ ಸಲ್ಲಿಸಿದ ದಿನದಿಂದ ಜಾರಿಯಾಗುವಂತೆ ನೀಡುವ, ಬೇರೆಯಾವುದಾದರೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದಿದ್ದರೆ, ಅದನ್ನೂ ಅಂತಿಮ ಪರಿಹಾರ ಮೊತ್ತದ ಜತೆಗೆ ಹೊಂದಾಣಿಕೆ ಮಾಡುವ ವ್ಯವಸ್ಥೆಯನ್ನೂ ಮಾರ್ಗಸೂಚಿಯಲ್ಲಿ ರೂಪಿಸಲಾಗಿದೆ.
ಇಂಥ ಪ್ರಕರಣಗಳನ್ನು ನಿರ್ಧರಿಸುವ ವಿಚಾರದಲ್ಲಿ ಏಕರೂಪತೆ, ಸ್ಥಿರತೆ ಕಾಯುವ ಮತ್ತು ಪರಿಹಾರದ ಪ್ರಮಾಣವನ್ನು ನಿರ್ಧರಿಸುವ ಸಲುವಾಗಿ ಕೆಲವು ಮಾನದಂಡಗಳನ್ನು ನಿರ್ಧರಿಸಲಾಗಿದೆ. ಎರಡೂ ಕಡೆಯವರು ತಮ್ಮ ಸೊತ್ತು ಮತ್ತು ಬಾಧ್ಯತೆಗಳನ್ನು ಘೋಷಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ ಹಾಗೂ ಸುಭಾಷ್ ರೆಡ್ಡಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಈ ನಿರ್ದೇಶನಗಳನ್ನು ನೀಡಿದೆ.
'ಮಹಿಳೆಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಹಲವು ಕಾನೂನುಗಳಿವೆ. ಇಂಥ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಕಾನೂನು ಹೇಳಿದ್ದರೂ, ವಿವಿಧ ಕಾರಣದಿಂದಾಗಿ ವಿಳಂಬವಾಗುತ್ತಿದೆ.
ಒಂದೇ ಪ್ರಕರಣವನ್ನು ಬೇರೆಬೇರೆ ಕಾನೂನುಗಳಡಿ ಪರಿಶೀಲಿಸುವುದು ಹಾಗೂ ತೀರ್ಪುಗಳಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ತಪ್ಪಿಸಲು ಸ್ಪಷ್ಟವಾದ ಮಾರ್ಗಸೂಚಿಯನ್ನು ರೂಪಿಸುವುದು ಅಗತ್ಯ ಎಂದು ಹೇಳಿರುವ ಪೀಠ, 'ಒಂದು ವೇಳೆ ಅರ್ಜಿದಾರರು ಬೇರೆಬೇರೆ ಕಾನೂನುಗಳಡಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರೆ, ನ್ಯಾಯಾಲಯವು ಇವುಗಳ ನಡುವೆ ಒಂದು ಹೊಂದಾಣಿಕೆ ಮಾಡಿಕೊಳ್ಳಬಹುದು ಅಥವಾ ಇನ್ನಷ್ಟು ಪರಿಹಾರ ನೀಡಬೇಕೇ ಎಂಬುದನ್ನು ನಿರ್ಧರಿಸಬಹುದು' ಎಂದಿದೆ.
ಯಾವುದೇ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವಾಗ, ಪ್ರಕರಣವಕ್ಕೆ ಸಂಬಂಧಿಸಿದಂತೆ ಹಿಂದೆ ಯಾವುದಾದರೂ ನ್ಯಾಯಾಲಯ ತೀರ್ಪು ನೀಡಿದೆಯೇ, ದೇಶದ ಯಾವುದಾದರೂ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆಯೇ ಮುಂತಾದ ವಿವರಗಳನ್ನು ಅರ್ಜಿದಾರರು ಬಹಿರಂಗಪಡಿಸುವುದು ಕಡ್ಡಾಯ ಎಂದಿರುವ ಪೀಠ, ಇದಕ್ಕಾಗಿ ಒಂದು ನಮೂನೆಯನ್ನೂ ಸಿದ್ಧಪಡಿಸಿದೆ.