ಹೊಸದಿಲ್ಲಿ: ಹಣಕಾಸು ಬಿಕ್ಕಟ್ಟಿನಲ್ಲಿರುವ ಲಕ್ಷ್ಮೀವಿಲಾಸ ಬ್ಯಾಂಕ್ (ಎಲ್‌ವಿಬಿ) ನ್ನು ಡಿಬಿಎಸ್ ಬ್ಯಾಂಕ್ ಆಫ್ ಇಂಡಿಯಾ ಲಿ.(ಡಿಬಿಐಎಲ್) ಜೊತೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಸರಕಾರವು ಒಪ್ಪಿಗೆಯನ್ನು ನೀಡಿದೆ. ಇದೇ ವೇಳೆ ಎಲ್‌ವಿಬಿಯಿಂದ ಹಣವನ್ನು ಹಿಂದೆಗೆದುಕೊಳ್ಳಲು ಹೇರಿದ್ದ ನಿರ್ಬಂಧಗಳನ್ನು ಅದು ರದ್ದುಗೊಳಿಸಿದೆ.
ಡಿಬಿಐಎಲ್ ಜೊತೆ ಎಲ್‌ವಿಬಿ ವಿಲೀನ ಯೋಜನೆಗೆ ಕೇಂದ್ರ ಸಂಪುಟವು ಹಸಿರು ನಿಶಾನೆಯನ್ನು ತೋರಿಸಿದೆ. ಸರಕಾರದ ಈ ನಿರ್ಧಾರದಿಂದ 20 ಲಕ್ಷ ಠೇವಣಿದಾರರಿಗೆ ಮತ್ತು 4,000 ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗಾರರಿಗೆ ತಿಳಿಸಿದರು. ಎಲ್‌ವಿಬಿಯ ಹಣಕಾಸು ಸ್ಥಿತಿ ಹದಗೆಡಲು ಕಾರಣರಾದವರನ್ನು ದಂಡನೆಗೆ ಒಳಪಡಿಸಲಾಗುವುದು ಎಂದರು.
ಆರ್‌ಬಿಐ ಸಲಹೆಯ ಮೇರೆಗೆ ಸರಕಾರವು ಗ್ರಾಹಕರು ಎಲ್‌ವಿಬಿಯಿಂದ 25,000 ರೂ.ಗೂ ಹೆಚ್ಚಿನ ಹಣವನ್ನು ಹಿಂದೆಗೆದುಕೊಳ್ಳುವುದನ್ನು ನಿರ್ಬಂಧಿಸಿ ನ.17ರಂದು ಆದೇಶವನ್ನು ಹೊರಡಿಸಿತ್ತು.
ಎಲ್‌ವಿಬಿ ಈ ವರ್ಷ ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ರಂಗದ ಎರಡನೇ ಬ್ಯಾಂಕ್ ಆಗಿದೆ. ಮಾರ್ಚ್‌ನಲ್ಲಿ ಸಂಕಷ್ಟದಲ್ಲಿದ್ದ ಯೆಸ್ ಬ್ಯಾಂಕ್‌ನಲ್ಲಿ 7,250 ಕೋ.ರೂ.ಗಳನ್ನು ಹೂಡಿಕೆ ಮಾಡುವಂತೆ ಮತ್ತು ಶೇ.45ರಷ್ಟು ಪಾಲುದಾರಿಕೆಯನ್ನು ಪಡೆಯುವಂತೆ ಎಸ್‌ಬಿಐಗೆ ಸೂಚಿಸುವ ಮೂಲಕ ಸರಕಾರವು ಅದನ್ನು ರಕ್ಷಿಸಿತ್ತು.