ತಿರುವನಂತಪುರ/ಕಾಸರಗೋಡು: ಗೋವಾ ರಾಜ್ಯದಲ್ಲಿ ಜನಪ್ರಿಯ ಸ್ಥಳೀಯ ಮದ್ಯವಾದ ಫೆನ್ನಿ ಯನ್ನು ಕೇರಳದಲ್ಲಿ ಉತ್ಪಾದಿಸುವ ಯೋಜನೆಯೊಂದಿಗೆ ಕೇರಳ ರಾಜ್ಯ ಗೇರು ಅಭಿವೃದ್ಧಿ ನಿಗಮ ಮುಂದಾಗಿದೆ. ಗೇರು ಹಣ್ಣಿನಿಂದ ಫೆನ್ನಿ ಉತ್ಪಾದನೆಗಾಗಿ ನಿಗಮವು ಯೋಜನಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಗೇರು ಅಭಿವೃದ್ಧಿ ನಿಗಮವು ಸರ್ಕಾರ ಮತ್ತು ಅಬಕಾರಿ ಇಲಾಖೆಯ ಅನುಮತಿಯೊಂದಿಗೆ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ.
ರಾಜ್ಯ ಗೇರು ನಿಗಮದ ಉದ್ದೇಶಿತ ಫೆನ್ನಿ ಉತ್ಪಾದನೆಗಾಗಿ ಕಿಟ್ಕೊ 13 ಕೋಟಿ ರೂ.ಗಳ ಆರ್ಥಿಕ ನೆರವಿನ ಪ್ರಸ್ತಾವನೆ ಇರಿಸಿದೆ. ಫೆನ್ನಿಯ ವಹಿವಾಟಿನ ಮೂಲಕ ನಿಗಮವು ವಾರ್ಷಿಕವಾಗಿ 100 ಕೋಟಿ ರೂ.ಗಳ ಲಾಭಗಳಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದೇ ವೇಳೆ ಫೆನ್ನಿಯನ್ನು ಹೇಗೆ ಮಾರಾಟ ಮಾಡುವುದು ಎಂಬುದರ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಗೇರು ಅಭಿವೃದ್ದಿ ನಿಗಮ ತಿಳಿಸಿದೆ.
ಫೆನ್ನಿ ಮಾರಾಟದ ಮೂಲಕ ಕೋವಿಡ್ ಅವಧಿಯಲ್ಲಿ ನಿಗಮಕ್ಕೆ ಆಗಿರುವ ನಷ್ಟವನ್ನು ಸರಿದೂಗಿಸಲು ನಿಗಮವು ಆಶಿಸಿದೆ. ಗೇರು ನಿಗಮವು ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ 100 ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಫೆನ್ನಿ ಉತ್ಪಾಧನಾ ಯೋಜನೆಯಲ್ಲಿರಿಸಿದೆ. ಗೇರು ಹಣ್ಣಿನ ಋತುವಿನಲ್ಲಿ ಸುಮಾರು ನಾಲ್ಕು ತಿಂಗಳುಗಳವರೆಗೆ ಗೇರು ಹಣ್ಣು ಸುಲಭವಾಗಿ ಲಭ್ಯವಿರುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಗೇರು ಕೊಯ್ಲಿಗೆ ಲಭ್ಯವಾಗತೊಡಗುತ್ತದೆ. ನಿಗಮದ ಅಧ್ಯಕ್ಷ ಎಸ್ ಜಯಮೋಹನ್ ಅವರ ಅಭಿಪ್ರಾಯದಂತೆ ಇದೇ ಋತುವಿನಿಂದಲೇ ಮದ್ಯ ಫೆನ್ನಿ ಉತ್ಪಾದನೆಯನ್ನು ಪ್ರಾರಂಭಿಸಲು ನಿಗಮ ಯೋಜಿಸಿದೆ.
ಗೇರು ನಿಗಮವು ಪ್ರಸ್ತುತ ಗೇರು ಅಭಿವೃದ್ದಿ ನಿಗಮ ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದರೂ, ಕೇರಳ ಸರ್ಕಾರದ ನಿಯಂತ್ರಿತ ಕಂಪನಿಯೊಂದು ಮದ್ಯ ಉತ್ಪಾದನೆಗೆ ಪ್ರವೇಶಿಸುವುದು ಇದೇ ಮೊದಲು.
ಪ್ರತಿ ವರ್ಷ ರಾಜ್ಯದಲ್ಲಿ 85,000 ಟನ್ ಗೇರು ಹಣ್ಣುಗಳು ವ್ಯರ್ಥವಾಗುತ್ತಿವೆ ಮತ್ತು ಹೊಸ ಯೋಜನೆ ಅನುಷ್ಠಾನದಿಂದ ಇದನ್ನು ಮೌಲ್ಯವರ್ಧಿತ ಉತ್ಪನ್ನವಾಗಿಸಬಹುದು ಎಂದು ನಿಗಮವು ನಿರೀಕ್ಷಿಸುತ್ತಿದೆ. ಈ ಉದ್ದೇಶಕ್ಕಾಗಿ ಗೇರು ಹಣ್ಣುಗಳನ್ನೂ ದಾಸ್ತಾನು ಮಾಡುವುದರಿಂದ ರೈತರು ಪ್ರಯೋಜನ ಪಡೆಯುತ್ತಾರೆ. ಗೇರು ಹಣ್ಣು ಪ್ರತಿ ಕೆ.ಜಿ.ಗೆ 3.75 ರೂ.ಗೆ ಖರೀದಿಸುವ ಯೋಜನೆ ಇದೆ. ತೋಟಗಳಲ್ಲದೆ, ರೈತರಿಗೆ ಹೊಸ ಆದಾಯ ಗಳಿಸಲು ಸಹ ಇದು ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಗೇರು ಉತ್ಪಾದನೆ ಹೊಂದಿರುವ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಿಂದ ಫೆನ್ನಿ ಉತ್ಪಾದನೆಗೆ ಗೇರು ಹಣ್ಣುಗಳನ್ನು ಸಂಗ್ರಹಿಸಲು ನಿಗಮವು ಆಶಿಸಿದೆ.