ಬೆಂಗಳೂರು: ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟು ವಿಚಾರಣೆ ಎದುರಿಸುತ್ತಿರುವ ಬಿನೀಶ್ ಕೊಡಿಯೇರಿಯ ಬಂಧನವನ್ನು ಮುಂದಿನ ಶನಿವಾರದವರೆಗೆ ವಿಸ್ತರಿಸಲಾಗಿದೆ. ಕಸ್ಟಡಿಯನ್ನು ಐದು ದಿನಗಳವರೆಗೆ ಈ ಮೂಲಕ ವಿಸ್ತರಿಸಲಾಯಿತು. ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಆರೋಗ್ಯ ಸಮಸ್ಯೆಗಳಿಂದಾಗಿ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರನ್ನು ಇನ್ನೂ 10 ದಿನಗಳ ಕಾಲ ಬಂಧನದಲ್ಲಿಡಬೇಕಾದೀತೆಂದು ಅಂದಾಜಿಸಲಾಗಿದೆ. ಆದರೆ ಬಿನೀಶ್ ಅವರನ್ನು ಐದು ದಿನಗಳ ಕಾಲ ಬಂಧನದಲ್ಲಿಡಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಬಿನೀಶ್ ನ್ಯಾಯಾಲಯಕ್ಕೆ ತಿಳಿಸಿದ್ದರು. ತೀವ್ರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿರುವೆ. ತಾನು 10 ಬಾರಿ ವಾಂತಿ ಮಾಡಿಕೊಂಡಿದ್ದೇನೆ ಎಂದು ಬಿನೀಶ್ ನ್ಯಾಯಾಲಯಕ್ಕೆ ತಿಳಿಸಿದರು. ಬಿನೀಶ್ ಅವರ ತಪಾಸಣೆ ವರದಿಗಳನ್ನು ಇಡಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ವಿಡಿಯೋ ಕಾನ್ಫರೆನ್ಸ್ ಮೂಲಕ ಬಿನೀಶ್ ನನ್ನು ಹಾಜರುಪಡಿಸುವ ಪ್ರಯತ್ನ ಮಾಡಲಾಯಿತು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು ಮತ್ತು ಖುದ್ದಾಗಿ ಹಾಜರಾಗುವಂತೆ ಬಿನೀಶ್ ಅವರನ್ನು ಕೇಳಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿನೀಶ್ ಅವರನ್ನು ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಡಿಸಲಾಯಿತು. ತನಿಖಾ ಅಧಿಕಾರಿಗಳು ಮತ್ತು ವಕೀಲರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಏತನ್ಮಧ್ಯೆ, ಬಂಧನದಲ್ಲಿರುವ ಬಿನೀಶ್ ಕೊಡಿಯೇರಿಗೆ ಕಾನೂನು ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಅವರ ಸಹೋದರ ಬಿನೊಯ್ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ಬಿನೀಶ್ ಅವರನ್ನು ಖುದ್ದಾಗಿ ನೋಡಲು ಅನುಮತಿ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.