ನವದೆಹಲಿ: ಭಾರತದಲ್ಲಿ ಆಯುರ್ವೇದಿಕ್ ತಜ್ಞವೈದ್ಯರಿಗೂ ಕೂಡಾ ಹಲವು ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ನೀಡುವುದಕ್ಕೆ ಅನುಮತಿ ನೀಡಲಾಗಿದೆ. ಆಯುರ್ವೇದದ ಸ್ನಾತಕೋತ್ತರ ಪದವಿ ಪಡೆದವರಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ನೇತ್ರಶಾಸ್ತ್ರ, ಇಎನ್‌ಟಿ ಮತ್ತು ದಂತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ವಿಧಾನಗಳನ್ನು ನಿರ್ವಹಿಸಲು ಅವಕಾಶ ನೀಡಲಾಗಿದೆ.
ಆಯುರ್ವೇದ ವಿಭಾಗದಲ್ಲಿ ಪದವಿ ಪಡೆದವರಿಗೆ ವಿಶೇಷ ತರಬೇತಿ ನೀಡುವುದಕ್ಕೆ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸನ್ ಅನುಮತಿ ನೀಡಿದೆ. ಆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಂಪ್ರದಾಯಿಕ ಚಿಕಿತ್ಸಾ ವಿಧಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.
ಹೊಸ ಗೆಜೆಟ್ ಅಧಿಸೂಚನೆಯ ಪ್ರಕಾರ, ಶಸ್ತ್ರಚಿಕಿತ್ಸಾ ವಿಧಾನಗಳ ತರಬೇತಿ ಮಾದರಿಯನ್ನು ಆಯುರ್ವೇದ ಅಧ್ಯಯನಗಳ ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ. ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಪಿಜಿ ಆಯುರ್ವೇದ ಶಿಕ್ಷಣ) ನಿಯಮಗಳು, 2016 ಅನ್ನು ತಿದ್ದುಪಡಿ ಮೂಲಕ ಈ ಬದಲಾವಣೆ ಮಾಡಲಾಗುತ್ತಿದೆ. ಆಯುರ್ವೇದ ಅಭ್ಯಾಸ ಮಾಡುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. "ಸಿಸಿಐಎಂ, ಕೇಂದ್ರ ಸರ್ಕಾರದ ಹಿಂದಿನ ಅನುಮೋದನೆಯೊಂದಿಗೆ, ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮ-2016 ಅನ್ನು ಮತ್ತಷ್ಟು ತಿದ್ದುಪಡಿ ಮಾಡಿರುವ ಬಗ್ಗೆ ಗೆಜೆತ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಕಾಯ್ದೆಯ ಮರುನಾಮಕರಣ:
ಈ ಕಾಯ್ದೆಯನ್ನು ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ತಿದ್ದುಪಡಿ ನಿಯಮಗಳು, 2020 ಎಂದು ಮರುನಾಮಕರಣಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಎರಡು ಹಂತದ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಎಂಎಸ್ (ಆಯುರ್ವೇದ) ಶಾಲ್ಯಾ ತಂತ್ರ ಅಂದರೆ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಎಂಎಸ್ (ಆಯುರ್ವೇದ) ಶಾಲ್ಯಕ್ಯ ತಂತ್ರ ಅಂದರೆ ಕಣ್ಣು, ಕಿವಿ, ಮೂಗು, ಗಂಟಲು, ತಲೆ ಮತ್ತು ಒರೊಡೆಂಟಿಸ್ಟ್ರಿ ರೋಗಕ್ಕೆ ಚಿಕಿತ್ಸೆ ನೀಡುವುದೇ ಆಗಿದೆ.
ಕೇಂದ್ರ ಸಚಿವಾಲಯದ ಸ್ಪಷ್ಟನೆ:
ಶಾಲ್ಯ ಮತ್ತು ಶಾಲ್ಯಕ್ಯ ತಂತ್ರದಲ್ಲಿ ಆಯುರ್ವೇದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳು 58 ನಿರ್ದಿಷ್ಟ ವಿಧಾನಗಳಿಗೆ ಚಿಕಿತ್ಸೆ ನೀಡುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಆಯುಷ್ ಸಚಿವಾಲಯದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಧಿಸೂಚನೆಯು ಯಾವುದೇ ನೀತಿಗಳ ಬದಲಾವಣೆ ಬಗ್ಗೆ ಸೂಚಿಸುವುದಿಲ್ಲ. ಈ ಹಿಂದೆ ಅಸ್ತಿತ್ವದಲ್ಲಿರುವ 2016ರ ನಿಬಂಧನೆಗಳ ಕುರಿತು ಸ್ಷಷ್ಟವಾಗಿ ಹೇಳಲಾಗಿದೆ. ಆರಂಭದಿಂದ ಶಲ್ಯ ಮತ್ತು ಶಲ್ಯಕ್ಯಾ ಆಯುರ್ವೇದ ಕಾಲೇಜುಗಳಲ್ಲಿ ಸ್ವತಂತ್ರ ಇಲಾಖೆಗಳಾಗಿದ್ದು, ಅಂತಹ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದೆ.
ಆಯುಷ್ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ ಆಧುನಿಕ ಪರಿಭಾಷೆ ಬಳಕೆಯ ಬಗ್ಗೆ ಸಚಿವಾಲಯಕ್ಕೆ ಯಾವುದೇ ಪ್ರತಿಕ್ರಿಯೆ ಅಥವಾ ಆಕ್ಷೇಪಣೆಗಳು ಬಂದಿಲ್ಲ. ಅಂತಹ ಯಾವುದೇ ವಿವಾದಗಳ ಬಗ್ಗೆ ತಿಳಿದಿಲ್ಲ. ಈ ಪರಿಭಾಷೆಗಳ ಮೇಲೆ ಯಾವುದೇ ವ್ಯಕ್ತಿ ಅಥವಾ ಗುಂಪು ಏಕಸ್ವಾಮ್ಯವನ್ನು ಹೊಂದಿಲ್ಲ ಎಂದು ಹೇಳಲಾಗಿದೆ.