ಹೊಸದಿಲ್ಲಿ: ವಿವಾದಿತ ಡೋಕ್ಲಾಂ ಪ್ರಸ್ಥಭೂಮಿಯ ಪೂರ್ವದ ಪರಿಧಿಯಲ್ಲಿ ಭೂತಾನ್‌ನ ಭೂಪ್ರದೇಶದಲ್ಲಿ ಎರಡು ಕಿ.ಮೀ.ನಷ್ಟು ಒಳಗೆ ಗ್ರಾಮವೊಂದನ್ನು ಸ್ಥಾಪಿಸಿರುವ ಜೊತೆಗೆ ರಸ್ತೆಯೊಂದನ್ನೂ ಚೀನಾ ನಿರ್ಮಿಸಿರುವುದನ್ನು ಹೈ ರೆಸೊಲ್ಯೂಷನ್ ಉಪಗ್ರಹ ಚಿತ್ರಗಳು ತೋರಿಸಿವೆ. ಈ ರಸ್ತೆಯು ಭೂತಾನಿನ ಭೂಪ್ರದೇಶದಲ್ಲಿ ಸುಮಾರು ಒಂಭತ್ತು ಕಿ.ಮೀ.ಗಳಷ್ಟು ಒಳಗೆ ಚಾಚಿಕೊಂಡಿದೆ.
ಈ ರಸ್ತೆಯು ರೊಂಪೆಲ್ರಿ ಬೆಟ್ಟಸಾಲನ್ನು ತಲುಪಲು ಚೀನಿ ಪಡೆಗಳಿಗೆ ಪರ್ಯಾಯ ಮಾರ್ಗವನ್ನು ಒದಗಿಸಬಹುದು ಎಂದು ಭಾವಿಸಲಾಗಿದೆ. 2017ರಲ್ಲಿ ಚೀನಿ ಪಡೆಗಳು ರೊಂಪೆಲ್ರಿ ಬೆಟ್ಟಸಾಲನ್ನು ಪ್ರವೇಶಿಸುವುದನ್ನು ಭಾರತೀಯ ಯೋಧರು ತಡೆದಿದ್ದು,ಆಗ ಉಂಟಾಗಿದ್ದ ಡೋಕ್ಲಾಮ್ ಬಿಕ್ಕಟ್ಟು ಎರಡು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿತ್ತು. 2018 ಎಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವುಹಾನ್‌ನಲ್ಲಿ ಭೇಟಿಯಾಗಿ ಗಡಿಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ನಿರ್ಧರಿಸಿದ ಬಳಿಕವಷ್ಟೇ ಬಿಕ್ಕಟ್ಟು ಅಂತ್ಯಗೊಂಡಿತ್ತು.
ಆ ಸಂದರ್ಭದಲ್ಲಿ ಸಿಕ್ಕಿಂ ಗಡಿ ಸಮೀಪದ ಡೋಕ್ಲಾ ದಲ್ಲಿರುವ ಭಾರತೀಯ ಸೇನೆಯ ನೆಲೆಗೆ ಸಮೀಪದ ತಮ್ಮ ರಸ್ತೆಯನ್ನು ರೊಂಪೆಲ್ರಿವರೆಗೆ ವಿಸ್ತರಿಸಲು ಚೀನಿ ನಿರ್ಮಾಣ ಕಾರ್ಮಿಕರು ಪ್ರಯತ್ನಿಸಿದ್ದರು. ರೊಂಪೆಲ್ರಿ ಬೆಟ್ಟಸಾಲಿಗೆ ಚೀನಿ ಪಡೆಗಳಿಗೆ ಪ್ರವೇಶ ಸಾಧ್ಯವಾಗುವುದರಿಂದ ಈಶಾನ್ಯ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ವ್ಯೂಹಾತ್ಮಕ 'ಚಿಕನ್ಸ್ ನೆಕ್'ನ್ನು ಸ್ಪಷ್ಟವಾಗಿ ವೀಕ್ಷಿಸಲು ಅವಕಾಶವಾಗುವುದರಿಂದ ಚೀನಿ ನಿರ್ಮಾಣ ಕಾರ್ಮಿಕರಿಂದ ರಸ್ತೆ ನಿರ್ಮಾಣ ಪ್ರಯತ್ನವನ್ನು ಭಾರತೀಯ ಸೇನೆಯು ತಡೆದಿತ್ತು.
ಈಗ ಮೂರು ವರ್ಷಗಳ ಬಳಿಕ ಚೀನಿ ನಿರ್ಮಾಣ ಕಾರ್ಮಿಕರು ಬೇರೊಂದು ಅಕ್ಷರೇಖೆಯ ಮೂಲಕ ಟೋರ್ಸಾ ನದಿಯ ದಂಡೆಯುದ್ದಕ್ಕೂ ಹೊಸ ರಸ್ತೆಯನ್ನು ನಿರ್ಮಿಸಿದ್ದು,ಇದು ಚೀನಾ ಮತ್ತು ಭೂತಾನ ನಡುವಿನ ಗಡಿಯಿಂದ ದಕ್ಷಿಣಕ್ಕೆ ವಿಸ್ತರಿಸಿದೆ. ಇದು 2017ರಲ್ಲಿ ಬಿಕ್ಕಟ್ಟು ಉಂಟಾಗಿದ್ದ ಸ್ಥಳದಿಂದ 10 ಕಿ.ಮೀ.ಗೂ ಕಡಿಮೆ ಅಂತರದಲ್ಲಿದೆ.
ಚೀನೀಯರು ಈ ಬಾರಿ ಡೋಕ್ಲಾಮ್‌ನ ಒಂದು ಮೂಲೆಯಲ್ಲಿರುವ 2017ರ ಬಿಕ್ಕಟ್ಟಿನ ಸ್ಥಳದ ಗೋಜಿಗೆ ಹೋಗಿಲ್ಲ. ಆದರೆ ಅವರು ಮೂರು ವರ್ಷಗಳ ಹಿಂದಿನವರೆಗೂ ಜನವಸತಿ ರಹಿತವಾಗಿದ್ದ ಪ್ರಸ್ಥಭೂಮಿಯಲ್ಲಿ ಶಾಶ್ವತ ಕಟ್ಟಡಗಳು ಮತ್ತು ರಸ್ತೆಗಳ ನಿರ್ಮಾಣ ಹಾಗೂ ಗ್ರಾಮಗಳ ಸ್ಥಾಪನೆಯೂ ಸೇರಿದಂತೆ ಡೋಕ್ಲಾಮ್‌ನ ಇತರ ಭಾಗದಲ್ಲಿ ಯಥಾಸ್ಥಿತಿಯನ್ನು ಹಂತ ಹಂತವಾಗಿ ಬದಲಿಸುತ್ತಿದೆ ಎಂದು ವ್ಯೂಹಾತ್ಮಕ ವಿಷಯಗಳ ತಜ್ಞ ಡಾ.ಬ್ರಹ್ಮ ಚೆನ್ನಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾದ ಸರಕಾರಿ ಪ್ರಾಯೋಜಿತ ಮಾಧ್ಯಮ ಸಿಜಿಟಿಎನ್‌ನ ಹಿರಿಯ ನಿರ್ಮಾಪಕ ಶೆನ್ ಶಿವೈ ಅವರು ಗುರುವಾರ ನದಿ ದಂಡೆಯಲ್ಲಿ ಹಲವಾರು ಗುಡಿಸಲುಗಳೊಂದಿಗೆ ಗ್ರಾಮವೊಂದರ ವಿವಿಧ ಚಿತ್ರಗಳನ್ನು ಪ್ರದರ್ಶಿಸುವುದರೊಂದಿಗೆ ಡೋಕ್ಲಾಮ್ ಪ್ರಸ್ಥಭೂಮಿಯ ಪೂರ್ವ ಪರಿಧಿಯಲ್ಲಿ ಚೀನಿ ರಸ್ತೆ ಮತ್ತು ಗ್ರಾಮ ನಿರ್ಮಾಣದ ಸ್ಪಷ್ಟ ಸಾಕ್ಷ್ಯವು ಹೊರಬಿದ್ದಿತ್ತು.
'ಈಗ ಹೊಸದಾಗಿ ಸ್ಥಾಪಿಸಲಾಗಿರುವ ಪಂಗ್ಡಾ ಗ್ರಾಮದಲ್ಲಿ ಕಾಯಂ ನಿವಾಸಿಗಳನ್ನು ನಾವು ಹೊಂದಿದ್ದೇವೆ. ಅದು ಯಾಡಂಗ್‌ನ 35 ಕಿ.ಮೀ.ದಕ್ಷಿಣಕ್ಕೆ ಕಣಿವೆಯುದ್ದಕ್ಕೆ ಚಾಚಿಕೊಂಡಿದೆ. ಅದರ ಸ್ಥಳವನ್ನು ತೋರಿಸುವ ನಕಾಶೆ ಇಲ್ಲಿದೆ 'ಎಂದು ಶಿವೈ ಟ್ವೀಟಿಸಿದ್ದರು.
ವಾಣಿಜ್ಯಿಕವಾಗಿ ಲಭ್ಯ ಕೆಲವು ಅತ್ಯಂತ ಸಮಗ್ರ ಉಪಗ್ರಹ ಚಿತ್ರಗಳನ್ನು ಒದಗಿಸುವ ಮ್ಯಾಕ್ಸಾರ್,ಈ ವರ್ಷ ಟೋರ್ಸಾ ನದಿ ಕಣಿವೆಯುದ್ದಕ್ಕೆ ಮಹತ್ವದ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವುದು ಸ್ಪಷ್ಟವಾಗಿದ್ದು,ಇದು ಮಹತ್ವಪೂರ್ಣವಾಗಿದೆ. ಡೋಕ್ಲಾಮ್ ಸಮೀಪದ ಚೀನಾದ ಪ್ರದೇಶದಲ್ಲಿ ವ್ಯಾಪಕ ರಸ್ತೆ ಕಾಮಗಾರಿ/ನಿರ್ಮಾಣ ಚಟುವಟಿಕೆಗಳು ಪ್ರಗತಿಯಲ್ಲಿದ್ದು, ನೂತನ ಮಿಲಿಟರಿ ದಾಸ್ತಾನು ಬಂಕರ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಹೇಳಿದೆ.
ಮ್ಯಾಕ್ಸಾರ್ ಒದಗಿಸಿರುವ ಉಪಗ್ರಹ ಚಿತ್ರಗಳು ಭಾರತದಲ್ಲಿ ಭೂತಾನ್ ರಾಯಭಾರಿ ಮೇ.ಜ.ವೆಸ್ಟಾಪ್ ನಾಂಗ್ಯೆಲ್ ಅವರು 'ಭೂತಾನದೊಳಗೆ ಯಾವುದೇ ಚೀನಿ ಗ್ರಾಮವಿಲ್ಲ 'ಎಂದು ನ.19ರಂದು ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿದೆ.
ವಿವಾದಿತ ಪ್ರದೇಶದಲ್ಲಿ ಗಡಿ ಮರುಹೊಂದಾಣಿಕೆಯ ಬಗ್ಗೆ ಭೂತಾನ ಮತ್ತು ಚೀನಾ ಒಡಂಬಡಿಕೆಯನ್ನೇನಾದರೂ ಮಾಡಿಕೊಂಡಿವೆಯೇ ಎಂಬ ಪ್ರಶ್ನೆಗೆ ನಾಂಗ್ಯೆಲ್,ಗಡಿ ವಿಷಯಗಳ ಕುರಿತು ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಉತ್ತರಿಸಿದ್ದರು. ಆದರೂ ಬಳಿಕ ಪ್ರತಿಕ್ರಿಯಿಸಿದ್ದ ಅವರು,ಭೂತಾನ್ ಮತ್ತು ಚೀನಾ ಗಡಿ ಮಾತುಕತೆಗಳಲ್ಲಿ ತೊಡಗಿರುವುದನ್ನು ದೃಢಪಡಿಸಿದ್ದರು.
ಇದರೊಂದಿಗೆ ಚೀನಾ ಪೂರ್ವ ಲಡಾಖ್ ಮಾತ್ರವಲ್ಲ, ಭಾರತ-ಚೀನಾ ಗಡಿಯುದ್ದಕ್ಕೂ ಡೋಕ್ಲಾಮ್ ಮತ್ತು ಇತರ ಭಾಗಗಳಲ್ಲಿ ತನ್ನ ಕುತಂತ್ರವನ್ನು ಮುಂದುವರಿಸಿದೆ ಎನ್ನುವುದು ಸ್ಪಷ್ಟವಾಗಿದೆ.
ಹೊಸ ಉಪಗ್ರಹ ಚಿತ್ರಗಳು ಡೋಕ್ಲಾಮ್ ಬಿಕ್ಕಟ್ಟಿನ ಸ್ಥಳದಿಂದ ಚೀನಾ ತನ್ನ ಸೇನೆಯನ್ನು ಹಿಂದೆಗೆದುಕೊಳ್ಳುವುದನ್ನು ಭಾರತವು ಅನಿವಾರ್ಯವಾಗಿಸಿದೆ ಎಂಬ 2017ರ ಹೇಳಿಕೆಗೆ ವ್ಯತಿರಿಕ್ತವಾಗಿ ಭಾರತ ಮತ್ತು ಭೂತಾನ್ ಸರಕಾರಗಳ ಭಾವನೆಗಳಿಗೆ ಸಂಪೂರ್ಣ ಅಗೌರವದೊಂದಿಗೆ ವಿವಾದಿತ ಪ್ರದೇಶದಲ್ಲಿ ಹಸ್ತಕ್ಷೇಪ ಮಾಡುವ ಚೀನಾದ ದೃಢಸಂಕಲ್ಪವನ್ನು ಬೆಟ್ಟು ಮಾಡುತ್ತಿವೆ.