ಮುಂಬೈ: 2018 ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
"ತನ್ನ ಅಸಾಮಾನ್ಯ ವ್ಯಾಪ್ತಿಯನ್ನು ಬಳಕೆ ಮಾಡುವುದಕ್ಕೆ ಕೋರ್ಟ್ ಎದುರು ಯಾವುದೇ ಸ್ಪಷ್ಟವಾದ ಕಾರಣಗಳಿಲ್ಲ" ಎಂದು ಅರ್ಜಿ ವಿಚಾರಣೆ ನಡೆಸಿರುವ ಎಸ್ಎಸ್ ಶಿಂಧೆ ಹಾಗೂ ಎಂಎಸ್ ಕರ್ಣಿಕ್ ಅವರಿದ್ದ ಪೀಠ ಹೇಳಿದೆ.
ಅರ್ಜಿದಾರ ಅರ್ನಬ್ ಗೋಸ್ವಾಮಿ ಸೆಷನ್ಸ್ ನ್ಯಾಯಾಲಯದಲ್ಲಿ ತಮ್ಮ ಅರ್ಜಿ ಸಲ್ಲಿಸಿ ಸಾಮಾನ್ಯವಾದ ಜಾಮೀನನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಅರ್ನಬ್ ಗೋಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಶನಿವಾರದಂದು ಕಾಯ್ದಿರಿಸಿತ್ತು. ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರದಂದು ಪ್ರಕಟಿಸಿರುವ ನ್ಯಾಯಾಲಯ, ಆರೋಪಿ ಸೆಷನ್ಸ್ ನ್ಯಾಯಾಲಯದಿಂದ ಸಾಮಾನ್ಯವಾದ ಜಾಮೀನನ್ನು ಪಡೆದುಕೊಳ್ಳುವುದನ್ನು ಹೈಕೋರ್ಟ್ ನಿರ್ಬಂಧಿಸುವುದಿಲ್ಲ ಎಂದು ಹೇಳಿದೆ.
ತಮ್ಮ ಅಕ್ರಮ ಬಂಧನವನ್ನು ಪ್ರಶ್ನಿಸಿ, ಮಧ್ಯಂತರ ಜಾಮೀನು ಮಂಜೂರು ಮಾಡಲು ಮನವಿ ಸಲ್ಲಿಸಿ ಅರ್ನಬ್ ಗೋಸ್ವಾಮಿ, ಫಿರೋಜ್ ಶೇಖ್, ನಿತೀಶ್ ಶಾರ್ದ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
2018 ರಲ್ಲಿ ಕಂಪನಿಗಳು ಬಾಕಿ ಹಣ ನೀಡದ ಕಾರಣಕ್ಕಾಗಿ ಇಂಟೀರಿಯರ್ ಡಿಸೈನರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಆತ್ಮಹತ್ಯೆ ಪತ್ರದಲ್ಲಿ ಅರ್ನಬ್ ಗೋಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ನಬ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದ್ದು ನ.04 ರಂದು ಬಂಧಿಸಲಾಗಿತ್ತು.