ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಜಾತಿ, ಧರ್ಮದ ಹೆಸರಲ್ಲಿ ಮತಯಾಚನೆ ನಡೆಸಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಾಲಯಗಳು, ಮಸೀದಿಗಳು, ಇಗರ್ಜಿಗಳು ಸಹಿತ ಆರಾಧನಾಲಯಗಳನ್ನು ಚುನಾವಣೆ ಪ್ರಚಾರಕ್ಕೆ ವೇದಿಕೆಗಳಾಗಿಸಕೂಡದು. ವಿವಿಧ ಜಾತಿ, ಧರ್ಮ, ಭಾಷಾ ಇತ್ಯಾದಿ ಸಂಬಂಧಿ ಸಂಘರ್ಷಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಪ್ರಚಾರ ವೇಳೆ ಜತೆಗಿರಿಸಿಕೊಳ್ಳಬಾರದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಮೂರು ವರ್ಷ ವರೆಗಿನ ಸಜೆ ಯಾ ಹತ್ತು ಸಾವಿರ ರೂ. ವರೆಗಿನ ದಂಡ ಅಥವಾ ಎರಡೂ ಸೇರಿ ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆ: ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು
ಸ್ಥಳೀಯಾಡಳಿತ ಚುನಾವಣೆ ಅಂಗವಾಗಿ ಕಾಸರಗೊಡು ಜಿಲ್ಲೆಯಲ್ಲಿ ಜಾರಿಗೊಂಡಿರುವ ನೀತಿಸಂಹಿತೆಯನ್ನು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸಹಿತ ಸಂಬಂಧಪಟ್ಟವರು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯ ಹೊಣೆಹೊಂದಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಅತೀವ ಜಾಗರೂಕತೆಯೊಂದಿಗೆ ನಡೆಸಬೇಕಿದೆ. ನಾಮಪತ್ರಿಕೆ ಸಲ್ಲಿಕೆ ವೇಳೆ ಅಭ್ಯರ್ಥಿ ಯಾ ಬೆಂಬಲಿಗ ಸಹಿತ ಮೂವರು ಮಾತ್ರ ಹಾಜರಾಗಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ಧ್ವಜ, ಚಿಹ್ನೆ, ಪ್ರಚಾರ ಫಲಕ ಇತ್ಯಾದಿಗಳನ್ನು ಸ್ಥಾಪಿಸಬಾರದು. ಈ ಆದೇಶ ಉಲ್ಲಂಘಿಸಿ, ಯಾರಾದರೂ ಸಾರ್ವಜನಿಕ ಪ್ರದೇಶಗಳಲ್ಲಿ ಇವುಗಳನ್ನು ಸ್ಥಾಪಿಸಿದರೆ ತೆರವುಗೊಳಿಸುವ ಹೊಣೆಯನ್ನು ಆಂಟಿ ಡೀಫೇಸ್ ಮೆಂಟ್ ವಿಭಾಗಕ್ಕೆ ನೀಡಲಾಗಿದೆ.
ಇತರ ರಾಜಕೀಯ ಪಕ್ಷ್ಗಳನ್ನು ಟೀಕಿಸುವ ವೇಳೆ ಸೀಮಿತತೆ, ನಿಯಂತ್ರಣ ಬೇಕು. ಅವರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲದ, ಖಾಸಗಿ ಜೀವನವನ್ನು ಟೀಕಿಸಬಾರದು. ಸಾಕ್ಷ್ಯಾಧಾರ ಹೊಂದದೇ ಇರುವ, ಕಪೆÇೀಲಕಲ್ಪಿತ ಆರೋಪಗಳನ್ನು ಟೀಕೆಗೆ ವಸ್ತುವಾಗಿಸಕೂಡದು. ವ್ಯಕ್ತಿಯೊಬ್ಬರ ಜಾಗ, ಕಟ್ಟಡ, ಆವರಣಗೋಡೆ ಇತ್ಯಾದಿ ಕಡೆ ಅವರ ಅನುಮತಿಯಿಲ್ಲದೆ ಭಿತ್ತಿಪತ್ರ, ಧ್ವಜ ಇತ್ಯಾದಿ ಸ್ಥಾಪಿಸಕೂಡದು. ಸರಕಾರಿ ಕಚೇರಿಗಳ ಗೋಡೆಗಳಲ್ಲಿ, ಆವರಣಗೋಡೆಗಳಲ್ಲಿ ಭಿತ್ತಿಪತ್ರ, ಧ್ವಜ ಇತ್ಯಾದಿಗಳನ್ನು ಸ್ಥಾಪಿಸಕೂಡದು.
ನಗರಸಭೆ ವ್ಯಾಪ್ತಿಯಲ್ಲಿ ಮತಗಟ್ಟೆಯ 100 ಮೀಟರ್ ಅಂತರದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ 200 ಮೀಟರ್ ಅಂತರದಲ್ಲಿ ಮತಯಾಚನೆ, ಮತದಾನ ಕೊನೆಗೊಳ್ಳುವ ಸಮೀಪದ 48 ತಾಸುಗಳ ಅವಧಿಯಲ್ಲಿ ಸಾರ್ವಜನಿಕ ಸಭೆ ನಡೆಸುವುದು, ಮತಗಟ್ಟೆಗಳಿಗೆ ಮತ್ತು ಮರಳಿ ಮನೆಗೆ ಮತದಾತರನ್ನು ವಾಹನಗಳ ಮೂಲಕ ಕರೆದೊಯ್ಯುವ ಇತ್ಯಾದಿ ಕ್ರಮಗಳು ಕಾನೂನು ವಿರುದ್ಧ ಚಟುವಟಿಕೆಗಳಾಗಿವೆ ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮ್ಯಾಥ್ಯೂ, ಆರ್.ಡಿ.ಒ. ಷಂಸುದ್ದೀನ್ ವಿ.ಜೆ.,ಸಹಾಯಕ ಜಿಲ್ಲಾಧಿಕಾರಿಗಳಾದ ಕೆ.ರವಿಕುಮಾರ್, ಸಿರೋಷ್ ಪಿ. ಜಾನ್, ಸರ್ವೇ ಡೆಪ್ಯೂಟಿ ಡೈರೆಕ್ಟರ್ ಕೆ.ಕೆ.ಸುನಿಲ್, ಎ.ಡಿ.ಸಿ. ಜನರಲ್ ಬೆಬಿನ್ ಜಾನ್ ವರ್ಗೀಸ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಕಾಞಂಗಾಡ್ ನಗರಸಭೆ ಆರ್.ಒ. ಮನೋಜ್ ಕುಮಾರ್ ವಿ.ವಿ., ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಬಿ.ಸುರೇಶ್ ಬಾಬು, ಟಿ.ಕೆ.ರಾಜನ್, ಎಂ.ಕುಂಞಂಬು ನಾಯರ್, ನ್ಯಾಷನಲ್ ಅಬ್ದುಲ್ಲ, ಮನುಲಾಲ್ ಮೇಲತ್ ಮೊದಲಾದವರು ಉಪಸ್ಥಿತರಿದ್ದರು.