ನವದೆಹಲಿ: 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ಜೈಲು ಸೇರಿರುವ ರಿಪಬ್ಲಿಕ್ ಟಿವಿ ಸಂಪಾದಕ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರು ಮಧ್ಯಂತರ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಕೈಗೆತ್ತಿಕೊಂಡಿತು.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದೆ. ನಾನು ರಿಪಬ್ಲಿಕ್ ಟಿವಿಯನ್ನು ನೋಡುವುದಿಲ್ಲ, ಆದರೆ ಈ ಪ್ರಕರಣದಲ್ಲಿ ಸಾಂವಿಧಾನಿಕ ಕೋರ್ಟ್ ಮಧ್ಯೆ ಪ್ರವೇಶಿಸದಿದ್ದರೆ ನಿಸ್ಸಂಶಯವಾಗಿ ನಾವು ವಿನಾಶದ ಹಾದಿಯಲ್ಲಿ ಹೋಗುತ್ತಿದ್ದೇವೆ ಎಂದರ್ಥ ಎಂದು ನ್ಯಾಯಮೂರ್ತಿಗಳು ಹೇಳಿದರು.
ಅರ್ನಬ್ ಗೋಸ್ವಾಮಿಯವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಳಿಕೊಂಡರು.
ಇಂದು ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು: ನಾವು ಅನೇಕ ಪ್ರಕರಣಗಳನ್ನು ನೋಡುತ್ತಿದ್ದೇವೆ, ಹೈಕೋರ್ಟ್ ಗಳು ಜಾಮೀನು ನೀಡುವಲ್ಲಿ ವಿಫಲವಾಗುತ್ತವೆ, ಜನರ ವೈಯಕ್ತಿಕ ಸ್ವಾತಂತ್ರ್ಯ ಕಾಪಾಡುವಲ್ಲಿ ವಿಫಲವಾಗುತ್ತಿವೆ.ಅಭಿಪ್ರಾಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಮೇಲೆ ರಾಜ್ಯ ಸರ್ಕಾರಗಳು ವೈಯಕ್ತಿಕವಾಗಿ ದಾಳಿ ಮಾಡುವುದು ಕಳವಳಕಾರಿ ಸಂಗತಿ.
ರಾಜ್ಯ ಸರ್ಕಾರಗಳು ಜನರ ವ್ಯಕ್ತಿಗತ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿದರೆ ಜನರ ಸ್ವಾತಂತ್ರ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಇರುತ್ತದೆ.