ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನಾಂಕವನ್ನು ಘೋಷಿಸಿರುವುದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೈನಂದಿನ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಇದ್ದಾಗ ಪತ್ರಿಕಾಗೋಷ್ಠಿಗಳನ್ನು ನಡೆಸಬಾರದೆಂಬ ನಿಯಮಾನುಸಾರ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಸಿಎಂ ಕಾರ್ಯಾಲಯ ಮೂಲಗಳು ತಿಳಿಸಿವೆ.
ಚುನಾವಣಾ ನೀತಿ ಸಂಹಿತೆ ಚಾಲ್ತಿಯಲ್ಲಿರುವುದರಿಂದ ಕೋವಿಡ್ ಮಾಹಿತಿಯನ್ನು ಹಂಚಿಕೊಳ್ಳಲು ಪ್ರತಿನಿತ್ಯದ ಸಂಜೆ ಆರು ಗಂಟೆಯ ಪತ್ರಿಕಾಗೋಷ್ಠಿಯನ್ನೂ ರದ್ದುಪಡಿಸಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಪ್ರಶ್ನೆಗಳು ಮತ್ತು ಹೇಳಿಕೆಗಳೇ ಹೆಚ್ಚಿರುವುದರಿಂದ ಇದು ನೀತಿಸಂಹಿತೆ ಉಲ್ಲಂಘನೆಯ ಸಾಧ್ಯತೆಯಾಗಲಿದ್ದು ಆದ್ದರಿಂದ ಇಂತಹ ತಾತ್ಕಾಲಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜಕೀಯ ಹೇಳಿಕೆ/ ಪ್ರಶ್ನೋತ್ತರಗಳು ನುಸುಳದಂತೆ ಪತ್ರಿಕಾಗೋಷ್ಠಿಯನ್ನು ಪುನರಾರಂಭಿಸಬಹುದೇ ಎಂಬ ಬಗ್ಗೆ ಸಿಎಂ ಕಚೇರಿ ಚರ್ಚಿಸುತ್ತಿದೆ. ಈ ಹಿನ್ನೆಲೆಯ ವಿಶೇಷ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿಯನ್ನು ಪುನರಾರಂಭಿಸಲು ಚರ್ಚೆಗಳು ನಡೆಯುತ್ತಿವೆ.
ಚುನಾವಣೆಗಳ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಮುಖ್ಯಮಂತ್ರಿ ತಮ್ಮ ಕಚೇರಿ ಅಥವಾ ಅಧಿಕೃತ ನಿವಾಸದಲ್ಲಿ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಸರ್ಕಾರದ ಪಿಆರ್‍ಡಿಯ ಸೌಲಭ್ಯಗಳನ್ನು ರಾಜಕೀಯವಾಗಿ ಪ್ರತಿಕ್ರಿಯಿಸಲು ಬಳಸುವುದು ಕಾನೂನುಬಾಹಿರ. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಪತ್ರಿಕಾಗೋಷ್ಠಿ ನಡೆಸಲು ಹೊಸ ವ್ಯವಸ್ಥೆಗಳನ್ನು ಪರಿಗಣಿಸುತ್ತಿದೆ.