ಕುಂಬಳೆ: ಕನ್ನಡ ಮಾಧ್ಯಮ ಹಾಗೂ ಪ್ರಗತಿಶೀಲ ಬರಹಗಳಲ್ಲಿ ಅದ್ವಿತೀಯ ಕೊಡುಗೆಯ ಮೂಲಕ ರವಿ ಬೆಳಗೆರೆ ಕನ್ನಡ ಭಾಷೆ, ಸಂಸ್ಕøತಿಗೆ ನೀಡಿರುವ ಯೋಗಧಾನ ಮಹತ್ತರವಾದುದು. ಶೂನ್ಯದಿಂದ ಸಹಸ್ರ ಸಂಖ್ಯೆಯ ಮೌಲ್ಯದ ವ್ಯಕ್ತಿತ್ವವಾಗಿ ಬೆಳೆದುನಿಂತ ಬೆಳಗೆರೆಯವರ ಬರಹಗಳು ಅನುಭವ ಜನ್ಯವಾದುದು. ಜಗದಗಲ ಸುತ್ತಿದ ಅವರ ಜೀವನಾನುಭವದ ಮೂಸೆಯಿಂದ ಅಕ್ಷರ ರೂಪಪಡೆದ ಬರಹಗಳು ಕನ್ನಡ ಸಾರಸ್ವತ ಲೋಕದ ಅನಘ್ರ್ಯ ರತ್ನಗಳು ಎಂದು ಕೇರಳ ಗ್ರಾಮೀಣ ಬ್ಯಾಂಕ್ ನ ನಿವೃತ್ತ ವಲಯ ಪ್ರಬಂಧಕ, ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಅವರು ತಿಳಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಕಾಸರಗೋಡು ಹಾಗೂ ಶಂಕರ್ ನಾಗ್ ಅಭಿಮಾನಿ ಬಳಗ ಕುಂಬಳೆ ಇವುಗಳ ಜಂಟಿ ಆಶ್ರಯದಲ್ಲಿ ಕುಂಬಳೆ ಅನ್ನಪೂರ್ಣ ಸಭಾ ಭವನದಲ್ಲಿ ಮಂಗಳವಾರ ನಡೆದ ದಿ.ರವಿ ಬೆಳಗೆರೆ ಶ್ರದ್ದಾಂಜಲಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಇದರ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು ಮಾತನಾಡಿ, ಕರ್ಮವೀರ ವ್ಯಕ್ತಿಯಾಗಿ, ದಿಟ್ಟ, ನಿರಹಂಕಾರಿ ಅಷ್ಟೇ ಹಾಸ್ಯ ಪ್ರಜ್ಞೆಯ ರವಿ ಬೆಳಗೆರೆಯವರು ನಿಷ್ಕಲ್ಮಶ ವ್ಯಕ್ತಿತ್ವದವರಾಗಿದ್ದರು ಎಂದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಖಜಾಂಜಿ, ಪತ್ರಕರ್ತ ರವಿ ನಾಯ್ಕಾಪು ಅವರು ಮಾತನಾಡಿ ವ್ಯಕ್ತಿ ಹೇಗೆ ಬದುಕಿದ್ದಾನೆ ಎನ್ನುವುದಕ್ಕಿಂತ ಸಮಾಜಕ್ಕೆ ಏನನ್ನು ನೀಡಿದ್ದಾನೆಂಬುದು ಮಹತ್ತರವಾದುದು. ಈ ನಿಟ್ಟಿನಲ್ಲಿ ಬದುಕಿನ ಎಲ್ಲಾ ಸಂಕಷ್ಟಗಳನ್ನೂ ದಾಟಿ ಅಕ್ಷರ ಬ್ರಹ್ಮನಾಗಿ ರವಿ ಬೆಳಗೆರೆಯವರು ಯಾವತ್ತಿಗೂ ಒಂದು ಅಚ್ಚರಿ ಎಂದು ತಿಳಿಸಿದರು. ವಿಕಾಸ ಮತ್ತು ವಿನಾಶಗಳೆರಡೂ ಸಮ್ಮಿಳಿತವಾಗಿದ್ದ ಬೆಳೆಗೆರೆ ವಿಕ್ಷಿಪ್ತ ವ್ಯಕ್ತಿತ್ವದವರು ಎಂದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರ ಎದೆಗಾರಿಕೆಗೆ ಮಾದರಿಯಾಗಿ ಬೆಳೆದಿದ್ದ ರವಿ ಬೆಳಗೆರೆಯವರ ಅಕಾಲಿಕ ಮರಣ ಅತೀವ ದುಃಖ ತರಿಸಿದೆ. ಅಭಿರ್ವರದ್ದಿ ಪತ್ರಿಕೋದ್ಯಮದ ಮೈಲುಗಲ್ಲಾಗಿ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಿಗೆ ಬೆಳಗೆರೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ ಎಂದರು.
ನಿವೃತ್ತ ಅಧ್ಯಾಪಕ ವೀರೇಶ್ವರ ಕಲ್ಮರ್ಕರ್, ರಾಜಕೀಯ ನೇತಾರೆ ಶಾಲಿನಿ ಗಟ್ಟಿ, ಭಾಸ್ಕರ ಕುಂಬಳೆ ಉಪಸ್ಥಿತರಿದ್ದು ಮಾತನಾಡಿದರು. ಜೆ.ಪಿ.ಕುಂಬಳೆ, ಲಕ್ಷ್ಮಣ ಪ್ರಭು ಕುಂಬಳೆ, ಶಂಕರ್ ನಾಗ್ ಅಭಿಮಾನಿ ಬಳಗದ ಸದಸ್ಯರು ರಾಜು ಸ್ಟೀಪನ್ ಡಿಸೋಜ, ಜಗನ್ನಾಥ ಕಾಸರಗೋಡು, ಪುರುಷೋತ್ತಮ ಪೆರ್ಲ, ಸಾಯಿಭದ್ರಾ ರೈ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಂಕರ್ ನಾಗ್ ಅಭಿಮಾನಿ ಬಳಗ ಕುಂಬಳೆ ಘಟಕದ ಸಂಚಾಲಕ ಉಜಾರು ಪೃಥ್ವಿರಾಜ್ ಶೆಟ್ಟಿ ವಂದಿಸಿದರು.