ದುಬೈ: ನಾಯಕ ಇವೊಯಿನ್ ಮಾರ್ಗನ್ (68*ರನ್, 35 ಎಸೆತ, 5 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ವೇಗಿ ಪ್ಯಾಟ್ ಕಮ್ಮಿನ್ಸ್ (34ಕ್ಕೆ 4) ಮಾರಕ ದಾಳಿ ನೆರವಿನಿಂದ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-13ರ ತನ್ನ 14ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 60 ರನ್‌ಗಳಿಂದ ಮಣಿಸಿತು. ಟೂರ್ನಿಯಲ್ಲಿ 7ನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಕೆಕೆಆರ್ ತಂಡ ಪ್ಲೇಆಫ್ ಹಂತಕ್ಕೇರುವ ಅವಕಾಶ ಉಳಿಸಿಕೊಂಡಿತು. ಲೀಗ್ ಹಂತದ ಕಡೇ ಎರಡು ಪಂದ್ಯಗಳ ಫಲಿತಾಂಶದ ಮೇಲೆ ಕೆಕೆಆರ್ ಭವಿಷ್ಯ ಅವಲಂಬಿಸಿದೆ. ಮತ್ತೊಂದೆಡೆ, ನಿರ್ಣಾಯಕ ಹೋರಾಟದಲ್ಲಿ ನಿರಾಸೆ ಅನುಭವಿಸಿದ ರಾಜಸ್ಥಾನ ತಂಡ 3ನೇ ತಂಡವಾಗಿ ಲೀಗ್‌ನಿಂದ ಹೊರಬಿದ್ದಿತು ಮತ್ತು ಕೊನೇ ಸ್ಥಾನಕ್ಕೆ ಕುಸಿತ ಕಂಡಿತು.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್‌ಗೆ 191 ರನ್ ಪೇರಿಸಿದರೆ, ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 131 ರನ್‌ಗಳಿಸಲಷ್ಟೇ ಶಕ್ತವಾಯಿತು.