ಕಾಸರಗೋಡು: ಕೋವಿಡ್ ವಿರುದ್ಧ ಜನಜಾಗೃತಿ ಮೂಡಿಸುವ ಕಿರುಚಿತ್ರದ ನಿರ್ಮಾಣ ಆರಂಭಗೊಂಡಿದೆ. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆರೋಗ್ಯ ಕಾರ್ಯಕರ್ತರು, ಚೆಂಗಳದ ಪೈಕದ ಯುವಕರ ತಂಡವೊಂದು ಈ ಕಿರುಚಿತ್ರದ ನಿರ್ಮಾಣ ನಡೆಸುತ್ತಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಸ್ವಿಚ್ ಆನ್ ನಡೆಸಿದರು. 5 ನಿಮಿಷ ಅವಧಿಯ ಚಿತ್ರ ಸಿದ್ಧಗೊಳ್ಳುತ್ತಿದೆ. ಫರಿಷ್ತಾ ಕ್ರಿಯೇಷನ್ಸ್ ಲಾಂಛನದಡಿ ಟೀಂ ಬಹರೈನ್ ತಂಡ ಈ ಚಿತ್ರ ನಿರ್ಮಿಸುತ್ತಿದೆ. "ದಿ ಚೈಲ್ಡ್ ಆಫ್ ರಿಮೈಂಡರ್" ಎಂಬ ಕಿರುಚಿತ್ರವನ್ನು ಈ ಹಿಂದೆ ಈ ತಂಡ ನಿರ್ಮಿಸಿತ್ತು. ಶಿಶು ಮನಸ್ಸಿನ ಜಾಗೃತಿ ಈ ಚಿತ್ರದ ಕಥಾನಕವಾಗಿದೆ. ಕೋವಿಡ್ ಅವಧಿಯಲ್ಲಿ ಮಗುವಿನ ಮನಸ್ಸು ಅತ್ಯಂತ ಸಂದಿಗ್ಧತೆ ಅನುಭವಿಸುತ್ತಿದೆ. ಈ ವಿಷಯವನ್ನು ಎತ್ತಿಕೊಂಡು ಕಥೆ ರಚಿಸಲಾಗಿದೆ.
ಬಿ.ಸಿ.ಕುಮಾರನ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಶಾಫೀ ಪೈಕ ಛಾಯಾಗ್ರಹಣ ನಡೆಸಿದ್ದಾರೆ. ಶಾಂತಿನಿ ದೇವಿ, ಮಸೂದ್ ಬೋವಿಕ್ಕಾನ, ಮಾಸ್ಟರ್ ರಿಂಸಾನ್, ರಾಸ್, ಅನ್ಶೀಫ್ ಅಹಮ್ಮದ್ ಮೊದಲಾದವರು ಅಭಿನಯಿಸಿದ್ದಾರೆ. ನ.7ರಂದು ಕಿರುಚಿತ್ರ ಬಿಡುಗಡೆಗೊಳ್ಳಲಿದೆ.
ಚಿತ್ರೀಕರಣ ಆರಮಭದ ವೇಳೆ ಕುಂಬಳೆ ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಚೆಂಗಳ ಆರೋಗ್ಯ ಇನ್ಸ್ ಪೆಕ್ಟರ್ ಕೆ.ಎಸ್.ರಾಜೇಶ್, ಶಾಫಿ ಚೂರಿಪಳ್ಳಂ, ಮಸೂದ್ ಬೋವಿಕ್ಕಾನ, ಶಾಫಿ ಪೈಕ ಮೊದಲಾದವರು ಉಪಸ್ಥಿತರಿದ್ದರು.