ತಿರುವನಂತಪುರ: ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಸಿಪಿಎಂ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಕೇಂದ್ರ ಏಜೆನ್ಸಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಗುರಿಯಾಗಿಸಿವೆ ಎಂದು ಸಿಪಿಎಂ ರಾಜ್ಯ ಸಮಿತಿ ಅಂದಾಜಿಸಿದೆ. ತನಿಖಾ ಸಂಸ್ಥೆಗಳ ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ ಮತ್ತು ಅದನ್ನು ಬಹಿರಂಗಪಡಿಸಬೇಕು ಎಂದು ಪಾಲಿಟ್ ಬ್ಯೂರೋ ಸಭೆಯಲ್ಲಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಜಾರಿ ನಿರ್ದೇಶನಾಲಯ ಸೇರಿದಂತೆ ಕೇಂದ್ರ ಸಂಸ್ಥೆಗಳು ರಾಜ್ಯದ ಪ್ರಮುಖ ಸರ್ಕಾರದ ಯೋಜನೆಗಳ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ಸಿಪಿಎಂ ಕ್ರಮ ಕೈಗೊಂಡಿದೆ. ಸಿಪಿಎಂ ಈ ತಿಂಗಳ 16 ರಂದು ಕೇಂದ್ರ ಏಜೆನ್ಸಿಗಳ ವಿರುದ್ಧ ರಾಜ್ಯವ್ಯಾಪಿ ಮುಷ್ಕರ ನಡೆಸಲು ಯೋಜಿಸಿದೆ.
ಮಾಶ್ಯಮ ವರದಿಯೊಂದರ ಪ್ರಕಾರ ಸಿಪಿಐ (ಎಂ) ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್ ಅವರ ತನಿಖೆಯು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟಿದೆ. ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಬಂಧಿಸಿದ ಬಳಿಕ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ವಿರುದ್ಧ ಇಡಿ ಕ್ರಮ ಕೈಗೊಂಡಿದೆ. ಆದರೆ ಸಿಪಿಐ (ಎಂ) ಪಕ್ಷದ ಮುಖಂಡರ ಅಭಿಪ್ರಾಯವೆಂದರೆ ಈ ಎಲ್ಲ ತನಿಖೆಗಳ ಗುರಿ ಮುಖ್ಯಮಂತ್ರಿ ಎನ್ನಲಾಗಿದೆ.
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಯುಡಿಎಫ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಿಳಿದಿದೆ. ಕೇಂದ್ರ ಸಂಸ್ಥೆಗಳ ತನಿಖೆ ಕಾನೂನುಬದ್ಧವಾಗಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಏಜೆನ್ಸಿಗಳು ರಾಜ್ಯ ಸರ್ಕಾರದ ಯೋಜನೆಗಳನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿವೆ ಎಂಬ ಆರೋಪವನ್ನೂ ಚೆನ್ನಿತ್ತಲ ನಿರಾಕರಿಸಿದರು.