ಬದಿಯಡ್ಕ: ಕಾಂಗ್ರೆಸ್ ಪಕ್ಷವು ಎಲ್ಲೆಡೆ ನಾಶವಾಗುವ ಹಂತ ತಲುಪಿದ್ದು, ದೇಶಾದ್ಯಂತ ಜನರು ಇಂದು ಬಿಜೆಪಿಯತ್ತ ಒಲವನ್ನು ತೋರಿಸುತ್ತಿದ್ದಾರೆ ಎಂಬುದಕ್ಕೆ ಇತ್ತೀಚೆಗಿನ ಚುನಾವಣೆಗಳೇ ಸಾಕ್ಷಿಯಾಗಿದೆ. ಕೇರಳ ರಾಜ್ಯದಲ್ಲಿ ಮುಸ್ಲಿಂಲೀಗ್‍ನ ಅಧೀನದಲ್ಲಿರುವ ಕಾಂಗ್ರೆಸ್ ಪಕ್ಷವು ತಾನು ತೋಡಿದ ಗುಂಡಿಗೆ ತಾನೇ ಬೀಳುತ್ತಿದೆ. ಬದಿಯಡ್ಕದಲ್ಲಿ ಕೊಡುಗೈದಾನಿ ಸಾಯಿರಾಂಗೋಪಾಲಕೃಷ್ಣ ಭಟ್ಟರ ಕುಟುಂಬವು ಇಂದು ಬಿಜೆಪಿ ಸೇರುವ ಮೂಲಕ ಯುಡಿಎಫ್‍ನ ಅವನತಿಗೆ ನಾಂದಿಹಾಡಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಹೇಳಿದ್ದಾರೆ.
ಗುರುವಾರ ಕಿಳಿಂಗಾರು ಶ್ರೀ ಸಾಯಿಮಂದಿರದಲ್ಲಿ ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ, ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಕುಟುಂಬವನ್ನು ಪಕ್ಷಕ್ಕೆ ಬರಮಾಡಿಕೊಂಡು , ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಂಲೀಗಿನ ಓಟಿಗಾಗಿ ತನ್ನನ್ನು ತಾನು ಮಾರಿಕೊಳ್ಳುವ ಕಾಂಗ್ರೆಸಿಗರು ಮಂಜೇಶ್ವರದ ಮೋಸಗಾರ ಶಾಸಕನ ವಿರುದ್ಧ ಧ್ವನಿ ಎತ್ತುವುದಿಲ್ಲ. ಪಾಕಿಸ್ತಾನದ ಹಿಂದುಗಳ ಸ್ಥಿತಿ ಇಂದು ಕೇರಳದಲ್ಲಿ ಉಂಟಾಗಿದೆ. ಕಾಂಗ್ರೆಸ್ ಪಕ್ಷವನ್ನು ಮುಸ್ಲಿಂಲೀಗ್ ನಿರ್ನಾಮಗೊಳಿಸಿದೆ. ದೇವರ ನಾಡಾದ ಕೇರಳದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಭಾರತೀಯ ಜನತಾಪಕ್ಷವು ಬಲಿಷ್ಠಗೊಳ್ಳಬೇಕಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಟ್ಟು ತನ್ನ ಬೇಳೆ ಬೇಯಿಸಿಕೊಳ್ಳುವ ಮುಸ್ಲಿಂಲೀಗಿನ ಕಪಟತನವನ್ನು ಎಲ್ಲಾ ಕಾಂಗ್ರೆಸಿಗರೂ ತಿಳಿಯಬೇಕಾಗಿದೆ. ಓರ್ವ ಹಿಂದುವಾಗಿ ಮುಸ್ಲಿಂಲೀಗಿನ ಮುಂದೆ ಮಂಡಿಯೂರದೆ ತನ್ನ ದಿಟ್ಟ ನಿಲುವನ್ನು ತಳೆದ ಧೀರ ನೇತಾರ ಕೆ.ಎನ್.ಕೃಷ್ಣ ಭಟ್ ಇಂದು ಬಿಜೆಪಿ ಸೇರಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ವಿಚಾರವಾಗಿದೆ ಎಂದರು.
ಕೆ.ಎನ್.ಕೃಷ್ಣ ಭಟ್ ಮಾತನಾಡಿ ರಾಜಕೀಯಕ್ಕಿಂತ ನನ್ನ ಧರ್ಮವೇ ಮೇಲು ಎಂದು ನಂಬಿದ ನಾನು ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಿರುವಂತೆ ಪಕ್ಷದಿಂದಲೇ ಒತ್ತಡ ಬಂದಿರುವುದು ತುಂಬಾ ನೋವನ್ನುಂಟುಮಾಡಿದೆ. ರಾಜಕೀಯಾತೀತವಾದ ಕುಟುಂಬ ಜೀವನ ನಮ್ಮದಾಗಿತ್ತು. ಅನಿವಾರ್ಯವಾಗಿ ರಾಜಕೀಯಕ್ಕೆ ಬಂದು ಕಳೆದ ಐದು ವರ್ಷಗಳಿಂದ ಯಾವುದೇ ಭ್ರಷ್ಟಾಚಾರವಿಲ್ಲದ ಆಡಳಿತವನ್ನು ನೀಡಿದ್ದೇನೆ. ಮೋದಿಯವರ ಉತ್ತಮ ರೀತಿಯ ಆಡಳಿತವು ಜನತೆಯ ಪರವಾಗಿದೆ ಎಂಬುದನ್ನು ಅರಿತ ನಾವು ಕುಟುಂಬಸಮೇತ ಭಾರತೀಯ ಜನತಾ ಪಕ್ಷವನ್ನು ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಜನಸೇವೆಯಲ್ಲಿ ಪಾಲ್ಗೊಳ್ಳುವುದಲ್ಲದೆ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಲಿದ್ದೇನೆ ಎಂದರು. ಪಕ್ಷದ ನೇತಾರರಾದ ಎಂ.ಸುಧಾಮ ಗೋಸಾಡ, ಸುರೇಶ್ ಕುಮಾರ್ ಶೆಟ್ಟಿ, ಸತೀಶ್ಚಂದ್ರ ಭಂಡಾರಿ ಕೋಳಾರು, ನ್ಯಾಯವಾದಿ ಸದಾನಂದ ರೈ, ಹರೀಶ್ ನಾರಂಪಾಡಿ, ಧನಂಜಯ ಮಧೂರು, ರಜನಿಸಂದೀಪ್, ರಾಮಪ್ಪ ಎಂ.ಪಿ., ಎಸ್. ಸತೀಶ್, ಸುಕುಮಾರ ಕುದ್ರೆಪ್ಪಾಡಿ, ಸತ್ಯಶಂಕರ ಭಟ್ ಹಿಳ್ಳೆಮನೆ, ಜಯದೇವ ಖಂಡಿಗೆ ಪಾಲ್ಗೊಂಡಿದ್ದರು. ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಶಂಕರ ಡಿ. ಸ್ವಾಗತಿಸಿ, ಅವಿನಾಶ್ ರೈ ವಂದಿಸಿದರು. ಸುನಿಲ್ ಪಿ.ಆರ್. ಹಾಗೂ ಮಹೇಶ್ ವಳಕ್ಕುಂಜ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಪಂ. ಸದಸ್ಯೆ ಶೀಲಾ ಕೆ.ಎನ್. ಭಟ್ ಸಹಿತ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದರು.