ಶ್ರೀನಗರ: ಜಮ್ಮು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ವೊಂದು ಹಾರಾಟ ನಡೆಸಿದ್ದು, ಬಿಎಸ್ ಎಫ್ ಸೈನಿಕರು ಗುಂಡಿನ ಹಾರಿಸಿದ ಬಳಿಕ ಡ್ರೋನ್ ಪಾಕಿಸ್ಥಾನಕ್ಕೆ ಮರಳಿದೆ.
ಶನಿವಾರ ರಾತ್ರಿ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
“ಜಮ್ಮು ಮತ್ತು ಕಾಶ್ಮೀರದ ಆರ್ ಎಸ್ ಪುರಾ ಸೆಕ್ಟರ್‌ನ ಅರ್ನಿಯಾ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ನಿನ್ನೆ ರಾತ್ರಿ ಡ್ರೋನ್ ಕಾಣಿಸಿಕೊಂಡಿದೆ. ಬಿಎಸ್‌ಎಫ್ ಸೈನಿಕರು ಅದರ ಮೇಲೆ ಗುಂಡು ಹಾರಿಸಿದ ನಂತರ ಅದು ಪಾಕಿಸ್ತಾನದ ಕಡೆಗೆ ಹಿಂತಿರುಗಿತು” ಎಂದು ಬಿಎಸ್‌ಎಫ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಒಂದು ವಾರದ ಹಿಂದೆ ಜಮ್ಮು ಕಾಶ್ಮೀರದ ಪೂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಎಲ್‌ಒಸಿ ಬಳಿ ಹಾರುವ ವಸ್ತುವೊಂದನ್ನು ಗುರುತಿಸಲಾಗಿತ್ತು. ಅದು ಕೂಡಾ ಭಾರತ ಭೂಪ್ರದೇಶದ ಮೇಲೆ ಹಾರಾಟ ನಡೆಸಿತ್ತು. ಇದಾಗಿ ಕೆಲವೇ ದಿನಗಳ ಬಳಿಕ ಡ್ರೋನ್ ಹಾರಾಟ ನಡೆಸಿದೆ.
ಕಳೆದ ತಿಂಗಳು, ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದಲ್ಲಿ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಸೇನೆಯ ಕ್ವಾಡ್‌ಕಾಪ್ಟರ್ ಅನ್ನು ಭಾರತೀಯ ಸೇನೆಯು ಹೊಡೆದುರುಳಿಸಿತ್ತು.